ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತನಿಖೆಯಲ್ಲಿ ಸಹಕರಿಸದಿದ್ದರೆ ಮುಷರಫ್ ಆಸ್ತಿ ವಶ (Pakistan | Musharraf | Petition | Court)
Feedback Print Bookmark and Share
 
ವಾಯವ್ಯ ಪಾಕಿಸ್ತಾನದ ಕೋರ್ಟೊಂದು ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಘೋಷಿತ ಅಪರಾಧಿ ಎಂದು ತೀರ್ಮಾನಿಸಿ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಬೇಕೆಂದು ಪೊಲೀಸರಿಗೆ ಸೂಚನೆ ನೀಡಿದೆ. ಮುಷರಫ್ ಅಧಿಕಾರಾವಧಿಯಲ್ಲಿ ಭದ್ರತಾ ಸಂಸ್ಥೆಗಳು ಬಂಧಿಸಿದ ವ್ಯಕ್ತಿಯು ನಾಪತ್ತೆಯಾಗಿರುವ ಕುರಿತು ನಡೆಸುತ್ತಿರುವ ತನಿಖೆಯಲ್ಲಿ ಮುಷರಫ್ ಸಹಕರಿಸದಿದ್ದರೆ ಅವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ತಿಳಿಸಿದೆ.

ನಾಪತ್ತೆಯಾದ ವ್ಯಕ್ತಿಯ ಕುಟುಂಬ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಬೋಟಾಬಾದ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮೇಲಿನ ಆದೇಶ ನೀಡಿದೆ. ವ್ಯಕ್ತಿಯ ಅಪಹರಣದಲ್ಲಿ ಮುಷರಫ್ ಪಾತ್ರವಹಿಸಿದ್ದಾರೆಂದು ಅರ್ಜಿಯಲ್ಲಿ ಕುಟುಂಬ ಆಪಾದನೆ ಹೊರಿಸಿದೆ. ಮುಷರಫ್ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ಮತ್ತು ತನಿಖೆಯಲ್ಲಿ ಸಹಕರಿಸದಿದ್ದರೆ ಅವರ ಆಸ್ತಿ ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದ್ದರಿಂದ ತಮಗೆ ತೃಪ್ತಿ ತಂದಿದೆಯೆಂದು ದೂರುದಾರರ ಪರ ವಕೀಲ ಮೊಹಮದ್ ಇಕ್ಬಾಲ್ ತಿಳಿಸಿದ್ದಾರೆ.

ಪೊಲೀಸರು ವ್ಯಕ್ತಿಯ ನಾಪತ್ತೆ ಪ್ರಕರಣ ಕುರಿತು ಕಳೆದ ಆರೇಳು ತಿಂಗಳಿಂದ ತನಿಖೆ ನಡೆಸುತ್ತಿದ್ದು, ದೂರಿನಲ್ಲಿ ಹೆಸರಿಸಿರುವ ಮುಷರಫ್ ಮತ್ತಿತರರನ್ನು ಬಂಧಿಸುವಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆಂದು ಇಕ್ಬಾಲ್ ತಿಳಿಸಿದ್ದಾರೆ. ಏಪ್ರಿಲ್ ಮಧ್ಯಾವಧಿಯಿಂದ ಪಾಕಿಸ್ತಾನದ ಹೊರಕ್ಕೆ ವಾಸಿಸುವ ಮುಷರಫ್, ಅಮೆರಿಕದಲ್ಲಿ ಇತ್ತೀಚೆಗೆ ಉಪನ್ಯಾಸ ಪ್ರವಾಸವನ್ನು ಮುಗಿಸಿದ್ದರು.

ಕಳೆದ ಕೆಲವು ತಿಂಗಳಿಂದ ಲಂಡನ್‌ನಲ್ಲಿ ಅವರು ವಾಸಿಸುತ್ತಿದ್ದಾರೆ. ಕಳೆದ ಜುಲೈನಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಮುಷರಫ್ ವಿಧಿಸಿದ ತುರ್ತುಪರಿಸ್ಥಿತಿಯನ್ನು ಅಸಂವಿಧಾನಿಕ ಮತ್ತು ಅಕ್ರಮ ಎಂದು ಘೋಷಿಸಿತು. ಇದರಿಂದ ದೇಶದ್ರೋಹದ ಆರೋಪಗಳ ಮೇಲೆ ಅವರನ್ನು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಉದ್ಭವಿಸಿತ್ತು. ಆದರೆ ಇಂತಹ ವಿಚಾರಣೆಯನ್ನು ಸರ್ಕಾರವೇ ಆರಂಭಿಸಬೇಕಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ