ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರದಲ್ಲಿ ಮತ್ತೆ ಸ್ಫೋಟಕ್ಕೆ ಐವರ ಬಲಿ (Blast | Terrorist | Bomber | Pakistan)
Feedback Print Bookmark and Share
 
ಪೇಶಾವರದಲ್ಲಿ ಆತ್ಮಾಹುತಿ ಬಾಂಬರ್ ತನ್ನ ಸ್ಫೋಟಕ ತುಂಬಿದ ವಾಹನವನ್ನು ಪೊಲೀಸ್ ಠಾಣೆಗೆ ಅಪ್ಪಳಿಸಿದ್ದರಿಂದ ಕನಿಷ್ಠ ಐವರು ಮೃತಪಟ್ಟಿದ್ದು, ಇನ್ನೂ 20 ಜನರು ಗಾಯಗೊಂಡಿದ್ದಾರೆ. ವಾಯವ್ಯ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಭಯಾನಕ ದಾಳಿಗಳನ್ನು ನಡೆಸುತ್ತಿದ್ದಾರೆ.

ಬೆಳಿಗ್ಗೆ 7.45ಕ್ಕೆ ದಾಳಿಕೋರ ಪ್ರಾಂತೀಯ ರಾಜಧಾನಿ ಹೊರವಲಯದ ಬಡಾಬೇರ್‌ನಲ್ಲಿ ಪೊಲೀಸ್ ಠಾಣೆಯೊಂದಕ್ಕೆ ಗುರಿಯಿರಿಸಿದನೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.ಶಕ್ತಿಶಾಲಿ ಸ್ಫೋಟದಿಂದ ಪೊಲೀಸ್ ಠಾಣೆಯ ಸಮೀಪವಿದ್ದ ಮಸೀದಿ ಮತ್ತು ಮನೆಯೊಂದು ಅವಶೇಷಗಳಾಗಿವೆ.ಅವಶೇಷಗಳಿಂದ ಐದು ದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 20 ಮಂದಿ ಗಾಯಗೊಂಡಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಖೈಬರ್ ಏಜೆನ್ಸಿಯ ದಿಕ್ಕಿನಿಂದ ಧಾವಿಸಿದ ಬಾಂಬರ್ ಕುಳಿತಿದ್ದ ಕಾರು ಪೊಲೀಸ್ ಠಾಣೆ ಮತ್ತು ಮಸೀದಿ ನಡುವೆ ಗೋಡೆಗೆ ಡಿಕ್ಕಿ ಹೊಡೆಯಿತು. ಸ್ಫೋಟದಿಂದಾಗಿ ಮಸೀದಿ ಕುಸಿತಗೊಂಡು ಪೊಲೀಸ್ ಠಾಣೆಗೆ ಹಾನಿಯಾಗಿದೆ. ಸಮೀಪದ ಮಾರುಕಟ್ಟೆಗೆ ಕೂಡ ಹಾನಿಯಾಗಿದೆಯೆಂದು ಜಿಲ್ಲಾಡಳಿತ ಮುಖ್ಯಸ್ಥ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಪೇಶಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಐದನೇ ಭಯೋತ್ಪಾದನೆ ದಾಳಿಯಾಗಿದೆ. ಭಾನುವಾರ ಬುರ್ಖಾ ಧರಿಸಿದ್ದ ಉಗ್ರಗಾಮಿಗಳ ದಾಳಿಯಿಂದ ಬಡಾಬೇರ್ ಪ್ರದೇಶದಲ್ಲಿ ತಾಲಿಬಾನ್ ವಿರೋಧಿ ಮೇಯರ್ ಜೀವಸಹಿತ ಪಾರಾಗಿದ್ದಾರೆ.

ಶನಿವಾರ ಪೊಲೀಸ್ ಚೌಕಿ ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಮೃತರಾಗಿದ್ದರು. ಪೇಶಾವರ ಐಎಸ್‌ಐ ಮುಖ್ಯಕೇಂದ್ರದ ಮೇಲೆ ಎರಡು ಕಾರ್ ಬಾಂಬ್ ದಾಳಿಯಲ್ಲಿ 17 ಜನರು ಮೃತರಾಗಿದ್ದರು. ಸ್ಥಳೀಯ ತಾಲಿಬಾನಿಗಳ ಆಶ್ರಯತಾಣವಾದ ದಕ್ಷಿಣ ವಜಿರಿಸ್ತಾನದಲ್ಲಿ ಕಳೆದ ತಿಂಗಳು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಪೇಶಾವರದಲ್ಲಿ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೇಶಾವರ, ಬಡಾಬೇರ್, ಖೈಬರ್, ಸ್ಫೋಟ