ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್‌ನಿಂದ ಪಾಕ್ ಪ್ರಾಚೀನ ಪರಂಪರೆ ನಾಶ (Taliban | Taxila | Pakistan | Gandhara)
Feedback Print Bookmark and Share
 
ತಾಲಿಬಾನ್ ಉಗ್ರರ ಸಂಘಟನೆ ಪಾಕಿಸ್ತಾನದ ಪ್ರಾಚೀನ ಗಾಂಧಾರ ಪರಂಪರೆಯನ್ನು ಮತ್ತು ಶ್ರೀಮಂತ ಬೌದ್ಧ ಪರಂಪರೆಯನ್ನು ನಾಶ ಮಾಡುತ್ತಿದೆಯೆಂದು ಪುರಾತತ್ವತಜ್ಞರು ಎಚ್ಚರಿಸಿದ್ದಾರೆ. ಪಾಕಿಸ್ತಾನದ ವಾಯವ್ಯದಲ್ಲಿ ಪ್ರವಾಸಿಗಳ ಯಾತ್ರೆ ಮತ್ತು ಸಂಶೋಧನೆ ಬರಡಾಗಿದ್ದು, ಉಗ್ರಗಾಮಿಗಳು ಸಂಸ್ಕೃತಿಯ ಶತ್ರುಗಳಾಗಿದ್ದಾರೆಂದು ತಾಕ್ಸಿಲಾ ಮ‌್ಯೂಸಿಯಂ ಕ್ಯೂರೇಟರ್ ಅಬ್ದುಲ್ ನಾಸಿರ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಇದೇ ರೀತಿ ಪರಿಸ್ಥಿತಿ ಮುಂದುವರಿದರೆ, ನಮ್ಮ ಸಂಸ್ಕೃತಿ, ಪರಂಪರೆಯನ್ನು ತಾಲಿಬಾನ್ ಸಂಪೂರ್ಣವಾಗಿ ನಾಶ ಮಾಡುತ್ತದೆಂದು ಅವರು ಹೇಳಿದ್ದಾರೆ. ಇಸ್ಲಾಮಾಬಾದ್‌ಗೆ 20 ಕಿಮೀ ದಕ್ಷಿಣಕ್ಕಿರುವ ಸಣ್ಣ ಪಟ್ಟಣ ತಾಕ್ಸಿಲಾ ಕ್ರಿಸ್ತಪೂರ್ವ 5ನೇ ಶತಮಾನದಿಂದ 2ನೇ ಶತಮಾನದವರೆಗೆ ಬೌದ್ಧ ಶಿಕ್ಷಣ ಕೇಂದ್ರವಾಗಿ ಇತಿಹಾಸ ಹೊಂದಿದ್ದು, ಪಾಕಿಸ್ತಾನದ ಮುಂಚೂಣಿಯ ಪುರಾತತ್ವ ಆಕರ್ಷಣೆಗಳಲ್ಲಿ ಒಂದಾಗಿದೆ.

ಪಾಕಿಸ್ತಾನದ ಬಾಂಬರ್‌ಗಳು ಮತ್ತು ಬಂದೂಕುಧಾರಿಗಳು ವಾಯವ್ಯ ಪ್ರಾಂತ್ಯದ ನಗರಗಳಲ್ಲಿ ದಾಳಿಯ ತೀವ್ರತೆ ಹೆಚ್ಚಿಸಿದ್ದು, ಹಿಂಸಾಚಾರ ಉಲ್ಬಣಿಸಿದೆ. ತಾಕ್ಸಿಲಾದಲ್ಲಿ ಕೂಡ ನಾವು ಸುರಕ್ಷಿತವಾಗಿಲ್ಲವೆಂದು ಖಾನ್ ಹೇಳಿದ್ದಾರೆ. ವಸ್ತುಸಂಗ್ರಹಾಲಯದ ಮೇಲೆ ದಾಳಿ ಸಾಧ್ಯತೆ ಕುರಿತು ಸ್ಥಳೀಯ ಆಡಳಿತ ಎಚ್ಚರಿಸಿದೆ. ನಾವು ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ, ಹಣಕಾಸು ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದು ಖಾನ್ ಹೇಳಿದ್ದಾರೆ.

ವಾರಗಳವರೆಗೆ ಒಬ್ಬ ಪ್ರವಾಸಿಯ‌ೂ ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಪ್ರವಾಸಿಗಳು ಬರದಿದ್ದರೆ, ಪ್ರವಾಸಿ ಸ್ಥಳಗಳನ್ನು ಸಂರಕ್ಷಿಸದಿದ್ದರೆ, ಸಂಶೋಧನೆ ನಿಂತುಹೋದರೆ ಪುರಾತತ್ವಶಾಸ್ತ್ರದ ಗತಿ ಏನಾಗಬೇಕೆಂದು ಅವರು ಪ್ರಶ್ನಿಸಿದ್ದಾರೆ. 2001 ಮಾರ್ಚ್‌ನಲ್ಲಿ ತಾಲಿಬಾನಿಗಳು ನೆರೆಯ ಆಫ್ಘಾನಿಸ್ತಾನದ 1500 ವರ್ಷಗಳಷ್ಟು ಪ್ರಾಚೀನವಾದ ಬಾಮಿಯಾನ್ ಬೌದ್ಧ ಪ್ರತಿಮೆಗಳನ್ನು ಸ್ಫೋಟಿಸಿ ಚೂರು ಚೂರಾಗಿ ಒಡೆದುಹಾಕಿದ್ದರು. ಆಗಿನಿಂದ ಇಸ್ಲಾಮಿಕ್ ಭಯೋತ್ಪಾದಕತೆ ಪಾಕಿಸ್ತಾನಕ್ಕೂ ಹರಡಿದೆ.
ಸಂಬಂಧಿತ ಮಾಹಿತಿ ಹುಡುಕಿ