ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಕ್ಕೇರಿಕೆ (Open doors | America | US | India | Student | Education)
Bookmark and Share Feedback Print
 
ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸತತ 8ನೇ ವರ್ಷ ಅಮೆರಿಕದ ಅತಿ ದೊಡ್ಡ ವಿದೇಶೀ ವಿದ್ಯಾರ್ಥಿ ಸಮುದಾಯ ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವಾರ್ಷಿಕ ವರದಿ 'ಓಪನ್ ಡೋರ್ಸ್' ತಿಳಿಸಿದೆ.

ಓಪನ್ ಡೋರ್ಸ್ ವರದಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಅಮೆರಿಕ ರಾಯ ಭಾರಿ ತಿಮೋತಿ ರೋಮರ್ ಅವರು, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಉಭಯ ದೇಶಗಳ ನಡುವಣ ಸಂಬಂಧ ಎಷ್ಟು ಗಾಢವಾದುದು ಎಂಬುದಕ್ಕೆ ಸಾಕ್ಷಿ. ನಾಗರಿಕರಿಗೆ ನೀಡುವ ಶಿಕ್ಷಣದ ಮೇಲೆ ಎರಡೂ ದೇಶಗಳ ಘನತೆ ಮತ್ತು ಸಾಮರ್ಥ್ಯವು ಅವಲಂಬಿತವಾಗಿದೆ ಹಾಗೂ ಶತ ಶತಮಾನಗಳ ವಿವೇಕದಿಂದ ರೂಪುಗೊಂಡ ಭಾರತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಸಂಕೇತಿಸುವ ಅಮೆರಿಕಾ ದೇಶಗಳನ್ನು ಈ ಸಂಬಂಧ ಬೆಸೆಯುತ್ತಿದೆ. ಇದು ಎರಡೂ ಮಹಾನ್ ರಾಷ್ಟ್ರಗಳ ಜನತೆಯ ನಡುವಣ ಸಹಕಾರದ ಭವಿಷ್ಯದ ದಿಕ್ಸೂಚಿ ಎಂದು ಅಭಿಪ್ರಾಯಪಟ್ಟರು.

ಯಾವುದೇ ನಂಬಿಕೆ, ಆರ್ಥಿಕ ಹಿನ್ನೆಲೆ ಮತ್ತು ಬದುಕಿನ ಯಾವುದೇ ಮಗ್ಗುಲಿನಿಂದ ಬಂದಿರಬಹುದಾದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಭವ ಹಾಗೂ ಅವಕಾಶಗಳನ್ನು ಸಮೃದ್ಧಗೊಳಿಸಲು ಅಮೆರಿಕಾ ಬದ್ಧವಾಗಿದೆ ಎಂದ ಅವರು, ನಾನು ಭಾರತದಾದ್ಯಂತ ಹಲವಾರು ಶಾಲೆಗಳಿಗೆ ಭೇಟಿ ನೀಡಿದ್ದೇನೆ, ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣವನ್ನು ಸಾಧನವನ್ನಾಗಿಸುವ ಬದ್ಧತೆ ಹಾಗೂ ಛಲಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕಂಡಿದ್ದೇನೆ. ಅವರ ಭವಿಷ್ಯ ಉಜ್ವಲವಾಗಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡುವುದು ಗೌರವದ ವಿಚಾರ ಎಂದು ನುಡಿದರು.

ಓಪನ್ ಡೋರ್ಸ್ ವರದಿ ಪ್ರಕಾರ ಲಭ್ಯವಾದ ಅಂಕಿ ಅಂಶಗಳು:

* ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2008-09 ಸಾಲಿಗಿಂತ ಶೇ.9 ಅಂದರೆ 94,562 ಇದ್ದದ್ದು 1,03,260ಕ್ಕೆ ಏರಿದೆ.

* ಸತತ ಎಂಟು ವರ್ಷಗಳಿಂದ ಅಮೆರಿಕಾಕ್ಕೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಕಳುಹಿಸುತ್ತಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದು.

* 2008-09 ಸಾಲಿನಲ್ಲಿ ಅಮೆರಿಕದಲ್ಲಿ ಅಧ್ಯಯನ ಮಾಡಿದ ಭಾರತೀಯರು: 15,600 ಪದವಿಪೂರ್ವ, 71,019 ಪದವಿ (ಸ್ನಾತಕೋತ್ತರ, ಪಿಎಚ್‌ಡಿ ಸಹಿತ) ಹಾಗೂ 1,755 ಪದವಿಯೇತರ ಮತ್ತು 14,886 ಇಂಟರ್ನ್‌ಷಿಪ್ ಅಭ್ಯರ್ಥಿಗಳು.

* 2009ರ ವರದಿ ಪ್ರಕಾರ, ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ಅಮೆರಿಕಾ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಶೇ.20ರಷ್ಟು ಏರಿಕೆ ಕಂಡಿದ್ದು, ಈ ಸಂಖ್ಯೆಯು 3,150 ತಲುಪಿದೆ.

ಅಮೆರಿಕಾದಲ್ಲಿ ಅಧ್ಯಯನ ಮಾಡಬಯಸುವ ಆಸಕ್ತರಿಗೆ ಮಾಹಿತಿ ನೀಡುವ ಎಜುಕೇಶನ್ ಯುಎಸ್ಎ ಎಂಬ (educationusa.state.gov) ಎಂಬ ಜಾಲವಿದ್ದು, ಅಮೆರಿಕಾ-ಭಾರತ ಪ್ರತಿಷ್ಠಾನದ ಕುರಿತು ಹೆಚ್ಚಿನ ಮಾಹಿತಿಯನ್ನು usief.org.in ಸೈಟಿನಲ್ಲಿ ಪಡೆಯಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ