ಆಸ್ಟ್ರೇಲಿಯಾದಲ್ಲಿ ಮತ್ತೆ ಭಾರತೀಯ ಯುವಕನೋರ್ವನ ಮೇಲೆ ಜನಾಂಗೀಯ ಹಲ್ಲೆ ನಡೆದಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ 23ರ ಹರೆಯದ ವಿದ್ಯಾರ್ಥಿ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಎದೆಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ ನಡೆದಿರುವುದಾಗಿ ಹೇಳಿದ್ದಾರೆ. ಇಲ್ಲಿನ ಬ್ರೌನ್ಸ್‌ವಿಕ್ ವೆಸ್ಟ್ ಸ್ಟ್ರೀಟ್‌ನಲ್ಲಿ ಯುವಕನ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಎದೆಗೆ ಚೂರಿ ಇರಿತ ಬಿದ್ದ ಪರಿಣಾಮ ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕ ತನ್ನ ಗಳತಿಯ ಮನೆಯ ಹೊರಭಾಗದಲ್ಲಿ ತನ್ನ ಕಾರನ್ನು ಪಾರ್ಕ್ ಮಾಡಿದ್ದ, ಈ ಸಂದರ್ಭದಲ್ಲಿ ಆಗಮಿಸಿದ್ದ ತಂಡವೊಂದು ಚೂರಿ ಇರಿದು ಪರಾರಿಯಾಗಿರುವುದಾಗಿ ದಿ ಏಜ್ ವರದಿ ತಿಳಿಸಿದೆ. ಕೂಡಲೇ ಮನೆಯಿಂದ ಓಡಿಬಂದ ಗೆಳತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿರುವುದಾಗಿ ಹೇಳಿದೆ.
ಆದರೆ ಈ ಹಲ್ಲೆ ಜನಾಂಗೀಯ ದ್ವೇಷದಿಂದ ನಡೆದಿದ್ದೋ ಇಲ್ಲವೇ ಹಣ ಲೂಟಿ ಮಾಡಲು ನಡೆದಿದೆಯೇ ಎಂಬುದನ್ನು ತನಿಖೆಯಿಂದ ತಿಳಿಯಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.