ಇಸ್ಲಾಮಾಬಾದ್ , ಬುಧವಾರ, 9 ಡಿಸೆಂಬರ್ 2009( 17:16 IST )
ಬುಡಕಟ್ಟು ಪ್ರದೇಶವಾದ ದಕ್ಷಿಣ ವಜೀರಿಸ್ತಾನ್‌ನಲ್ಲಿ ಭಾರಿ ಸೇನಾಕಾರ್ಯಾಚರಣೆಯಿಂದಾಗಿ ಉಗ್ರರು ನೈತಿಕಸ್ಥೈರ್ಯ ಕಳೆದುಕೊಂಡಿಲ್ಲ. ತಾಲಿಬಾನಿಗಳು ತಮ್ಮ ಶಕ್ತಿಯನ್ನು ಉಳಿಸಿಕೊಂಡಿದ್ದು, ಅಗತ್ಯವಾದಾಗ ಸೇನೆಯ ಮೇಲೆ ತಿರುಗಿಬೀಳಲಿದೆ ಎಂದು ಪಾಕಿಸ್ತಾನದ ತಾಲಿಬಾನ್ ಮುಖ್ಯಸ್ಥ ಹಕೀಮುಲ್ಲಾ ಮೆಹಸೂದ್ ಹೇಳಿದ್ದಾರೆ.
ಚಳಿಗಾಲದ ಸಮಯದಲ್ಲಿ ನಾವು ಪ್ರಬಲವಾಗಿರುವುದರಿಂದ, ಸೇನೆಯ ವಿರುದ್ಧದ ಕಾರ್ಯಾಚರಣೆಗಾಗಿ ಜನೆವರಿಯವರೆಗೆ ನಿರೀಕ್ಷಿಸುತ್ತಿದ್ದೇವೆ ಎಂದು ತೆಹರಿಕ್-ಎ-ತಾಲಿಬಾನ್ ಮುಖ್ಯಸ್ಥ ಹಕೀಮುಲ್ಲಾ ತಿಳಿಸಿದ್ದಾರೆ
ಅಫ್ಘಾನ್ ಗಡಿಯಲ್ಲಿರುವ ದಕ್ಷಿಣ ವಜೀರಿಸ್ತಾನ್‌ನಲ್ಲಿ ತಾಲಿಬಾನಿಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಪಾಕಿಸ್ತಾನದ ಬೃಹತ್ ಸೇನಾ ಕಾರ್ಯಾಚರಣೆಯ ಮಧ್ಯೆಯು, ತಮಗೆ ಸೇನೆಯನ್ನು ಎದುರಿಸುವ ವಿಶ್ವಾಸವಿದೆ ಎಂದು ಮೆಹಸೂದ್ ಹೇಳಿದ್ದಾರೆ.
ದಕ್ಷಿಣ ವಜೀರಿಸ್ತಾನ್‌ನಲ್ಲಿ 600 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದ್ದು, 60ಕ್ಕೂ ಹೆಚ್ಚು ಸೈನಿಕರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. 30 ಸಾವಿರ ಸೈನಿಕರು ಆರ್ಟಿಲ್ಲರಿ ಮತ್ತು ಸೇನಾಟ್ಯಾಂಕ್‌ಗಳೊಂದಿಗೆ ತಾಲಿಬಾನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಯುದ್ಧಪೀಡಿತ ಪ್ರದೇಶಕ್ಕೆ ಮಾಧ್ಯಮಗಳು ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಸೇನಾ ವಕ್ತಾರರು ನೀಡಿದ ಸಂಖ್ಯೆಗಳು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಸೇನಾಪಡೆಗಳು, ಪಾಕಿಸ್ತಾನದ ತಾಲಿಬಾನ್ ಮುಖ್ಯಸ್ಥ ಹಕೀಮುಲ್ಲಾ ಅವರ ಪಟ್ಟಣ ಸೇರಿದಂತೆ ಅನೇಕ ತಾಲಿಬಾನಿಗಳ ಭಧ್ರಕೋಟೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಉನ್ನತ ನಾಯಕರನ್ನು ಹತ್ಯೆ ಮಾಡಿರುವದು ಅಥವಾ ವಶಕ್ಕೆ ತೆಗೆದುಕೊಂಡಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.