ವಾಷಿಂಗ್ಟನ್, ಗುರುವಾರ, 10 ಡಿಸೆಂಬರ್ 2009( 09:59 IST )
ಕಳೆದ ವರ್ಷ ಬಾಂಬ್ ತಯಾರಿ ಆರೋಪದ ಮೇಲೆ ಬಂಧಿತನಾಗಿದ್ದ ಯುವಕ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಕೊಲೆಗೆ ಸಂಚು ನಡೆಸಿದ್ದ ಎಂಬ ಗುಟ್ಟು ಇದೀಗ ರಟ್ಟಾಗಿದೆ.
ಕಳೆದ ವರ್ಷ ಬಾಂಬ್ ತಯಾರಿ ಆರೋಪದ ಮೇಲೆ ಕೊಲಿನ್ ಮೆಕೆನ್ಱಿ ಗೂಡ್ ಎಂಬಾತನನ್ನು ಸೆರೆ ಹಿಡಿಯಲಾಗಿತ್ತು. ಈತ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭ ಒಬಾಮಾ ಅವರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದ ಎಂದು ಆತನ ಮಿತ್ರನೊಬ್ಬ ಹೇಳಿರುವುದಾಗಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಈತ ಒಬಾಮಾ ಬೆಂಬಲಿಗರನ್ನು ಬಾಂಬ್ ಸ್ಫೋಟಿಸಿ ಕೊಲ್ಲಲು ಮತ್ತು ಒಬಾಮಾ ಅವರನ್ನು ರೈಫಲ್ ಬಳಸಿ ಕೊಲೆಗೈಯಲು ಸಂಚು ರೂಪಿಸಿದ್ದಾನಂತೆ.
ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಬರಾಕ್ ಒಬಾಮಾ ಅವರಿಗೆ ಪ್ರತಿದಿನ 30 ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ಇತ್ತೀಚೆಗಷ್ಟೇ ಮಾಹಿತಿಯೊಂದು ಹೊರಬಿದ್ದಿತ್ತು. ಆ ನಿಟ್ಟಿನಲ್ಲಿ ಒಬಾಮಾ ಅವರಿಗೆ ಬಿಗಿ ಭದ್ರತೆಯನ್ನು ನೀಡಲಾಗಿದೆ ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.