ಅಫ್ಘಾನಿಸ್ತಾನಕ್ಕೆ ಮರಳಿ ಸೇನಾಪಡೆಗಳನ್ನು ಕಳುಹಿಸುವ ದಕ್ಷಿಣ ಕೊರಿಯಾ ನಿರ್ಧಾರದಿಂದ, ತಾಲಿಬಾನ್ ಅಕ್ರೋಶಗೊಂಡಿದ್ದು, ಸೇನೆಯನ್ನು ಕಳುಹಿಸಿದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಮಾಧ್ಯಮಗಳಿಗೆ ಇ-ಮೇಲ್ ಸಂದೇಶವನ್ನು ರವಾನಿಸಿದ ತಾಲಿಬಾನ್, ದಕ್ಷಿಣ ಕೊರಿಯಾ ನಾಯಕರು ಮುಂದಿನ ದಿನಗಳಲ್ಲಿ ನಡೆಯಲಿರುವ ಅನಾಹುತಗಳನ್ನು ಎದುರಿಸಲು ಸಿದ್ಧರಾಗುವಂತೆ ಬೆದರಿಕೆ ಒಡ್ಡಿದೆ.
ಅಫ್ಘಾನ್‌ನಲ್ಲಿ ನಾಗರಿಕರಿಗೆ, ವೈದ್ಯಕೀಯ ಸೇವೆ ನೀಡುವಲ್ಲಿ ನಿರತರಾದ ಕೊರಿಯಾ ನಾಗರಿಕರಿಗೆ ರಕ್ಷಣೆಯನ್ನು ನೀಡಲು 350 ಪಡೆಗಳನ್ನು ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದಕ್ಷಿಣ ಕೊರಿಯಾ ಪ್ರಕಟಿಸಿತ್ತು.
ತಾಲಿಬಾನಿ ಉಗ್ರರು ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಇಬ್ಬರು ಕೊರಿಯಾ ನಾಗರಿಕರನ್ನು ಹತ್ಯೆಗೈದ ನಂತರ, ಕೊರಿಯಾ ಸುಮಾರು 200 ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ನಂತರ 2007ರಿಂದ ಅಫ್ಘಾನಿಸ್ತಾನಕ್ಕೆ ಸೇನೆಪಡೆಗಳನ್ನು ಕಳುಹಿಸಲು ಕೊರಿಯಾ ನಿರಾಕರಿಸಿತ್ತು.