'ಮೇಡ್ ಇನ್ ಇಂಡಿಯಾ' ಹೆಸರಲ್ಲಿ ಮಲೇರಿಯಾ ನಕಲಿ ಔಷಧಿಗಳನ್ನು ನೈಜೀರಿಯಾಕ್ಕೆ ರಫ್ತು ಮಾಡಿದ್ದ ಆರು ಮಂದಿ ಚೀನಾದ ವ್ಯಾಪಾರಸ್ತರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಅಲ್ಲಿನ ಕಮ್ಯೂನಿಸ್ಟ್ ಸರಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ.
ಕಳೆದ ಹಲವಾರು ವರ್ಷಗಳಿಂದ 'ಮೇಡ್ ಇನ್ ಇಂಡಿಯಾ' ಹೆಸರಿನಲ್ಲಿ ಚೀನಾದಿಂದ ನೈಜೀರಿಯಾಕ್ಕೆ ನಕಲಿ ಔಷಧಿಗಳು ರಫ್ತಾಗುತ್ತಿದ್ದವು. ಇದೇ ವರ್ಷದ ಜೂನ್ ತಿಂಗಳಲ್ಲಿ ಸುಮಾರು 210,000 ಅಮೆರಿಕನ್ ಡಾಲರ್ ಮೌಲ್ಯದ ನಕಲಿ ಡ್ರಗ್ಸ್‌ಗಳನ್ನು ನೈಜೀರಿಯಾದ ರಾಷ್ಟ್ರೀಯ ಆಹಾರ ಮತ್ತು ಔಷಧಿ ಆಡಳಿತ ಮತ್ತು ನಿಯಂತ್ರಣ ವಿಭಾಗವು ವಶಪಡಿಸಿಕೊಂಡ ನಂತರ ಭಾರೀ ವಿವಾದ ಸೃಷ್ಟಿಯಾಗಿತ್ತು.
ಈ ಸಂಬಂಧ ನೈಜೀರಿಯಾದ ಕ್ಷಮೆ ಕೋರಿದ್ದ ಚೀನಾ ಸರಕಾರ, ಕೂಲಂಕಷ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಭರವಸೆ ನೀಡಿತ್ತು. ಆದರೆ ಇದಕ್ಕೆ ಕೇವಲ ಚೀನಾ ಮಾತ್ರ ಜವಾಬ್ದಾರಿಯಲ್ಲ, ಭಾರತೀಯರು ಕೂಡ ಇದೇ ರೀತಿಯಲ್ಲಿ ನೈಜೀರಿಯಾಕ್ಕೆ ಔಷಧಿಗಳನ್ನು ರಫ್ತು ಮಾಡಿರುವುದು ಪತ್ತೆಯಾಗಿದೆ ಎಂದು ಸಮಾಜಾಯಿಷಿಗೆ ಯತ್ನಿಸಿತ್ತು.
ಭಾರತದ ಹೆಸರನ್ನು ಬಳಸಿಕೊಂಡು ದಕ್ಷಿಣ ಆಫ್ರಿಕಾ, ಗಯಾನ, ಐವೋರಿ ಕೋಸ್ಟ್ ಮತ್ತು ಇತರ ದಕ್ಷಿಣ ಆಫ್ರಿಕಾ ದೇಶಗಳಿಗೆ ಚೀನಾ ಮೂಲದಿಂದ ನಕಲಿ ಔಷಧಿಗಳು ರಫ್ತಾಗುತ್ತಿರುವ ದೂರುಗಳನ್ನು ಸ್ವೀಕರಿಸಿರುವುದಾಗಿ ಭಾರತದ ವಾಣಿಜ್ಯ ಸಚಿವಾಲಯವೂ ಖಚಿತಪಡಿಸಿತ್ತು.
ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ್ದ ಚೀನಾ, ಅಪರಾಧಿಗಳೆಂದು ರುಜುವಾತಾದ ಆರು ಮಂದಿಗೆ ಮರಣ ದಂಡನೆ ವಿಧಿಸಿದೆ. ಆದರೆ ಅವರ ಕುರಿತ ಹೆಚ್ಚಿನ ವಿವರಗಳನ್ನು ನೀಡಲು ಚೀನಾದ ವಾಣಿಜ್ಯ ಸಚಿವಾಲಯ ನಿರಾಕರಿಸಿದೆ.
ಈಗ ಅಂತವರ ವಿರುದ್ಧ ಚೀನಾ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ತೀವ್ರ ತನಿಖೆಗೊಳಪಡಿಸಿದ ನಂತರ ಶಿಕ್ಷೆ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ತನಿಖೆಯಲ್ಲಿ ಪತ್ತೆಯಾದ ಕೆಲವರು ಈಗ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ನಕಲಿ ಔಷಧ ತಯಾರಕರ ವಿರುದ್ಧ ಭಾರತೀಯ ಸಂಸತ್ತು ಕೂಡ ಕಠಿಣ ಕಾನೂನು ರಚಿಸಿದೆ. ಚೀನಾದಲ್ಲಿ ಡ್ರಗ್ಸ್ ಮಾಫಿಯಾದವರಿಗೆ ಕಠಿಣಾತಿಕಠಿಣ ಶಿಕ್ಷೆಯಾದ ಮರಣದಂಡನೆಯನ್ನೇ ವಿಧಿಸಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.
2001ರಿಂದ 2007ರ ಅವಧಿಯಲ್ಲಿ ಭಾರತ ಮತ್ತು ಚೀನಾದ ಸುಮಾರು 30ರಷ್ಟು ನಕಲಿ ಔಷಧಿ ಉತ್ಪಾದಕ ಸಂಸ್ಥೆಗಳನ್ನು ನೈಜೀರಿಯಾ ನಿಷೇಧಿಸಿದೆ. ನಮ್ಮ ಕಂಪನಿಗಳ ಘನತೆಯನ್ನು ಹಾಳುಗೆಡವಲು ಚೀನಾ ರಫ್ತುದಾರರು 'ಮೇಡ್ ಇನ್ ಇಂಡಿಯಾ' ಎಂಬ ಹಣೆಪಟ್ಟಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತೀಯ ಔಷಧಿ ಸಂಸ್ಥೆಗಳು ವಾದಿಸಿದ್ದವು.