ಮೆಲ್ಬೋರ್ನ್, ಶುಕ್ರವಾರ, 11 ಡಿಸೆಂಬರ್ 2009( 15:00 IST )
ND
'ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಇಷ್ಟು ಬೇಗ ನೊಬೆಲ್ ಪ್ರಶಸ್ತಿ ನೀಡಿರುವುದು ಎಷ್ಟು ಸರಿ' ಎಂದು ನೊಬೆಲ್ ಪ್ರಶಸ್ತಿ ವಿಜೇತ ದಲೈ ಲಾಮಾ ಪ್ರಶ್ನಿಸಿದ್ದಾರೆ.
ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಬಲವರ್ಧನೆ ಮತ್ತು ಶಾಂತಿಗಾಗಿ ಕಾರ್ಯನಿರ್ವಹಿಸುತ್ತಿರುವ ಒಬಾಮಾ ಅವರಿಗೆ ಗುರುವಾರ ನಾರ್ವೆಯ ಒಸ್ಲೊದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಅಹಿಂಸೆಯನ್ನು ಪ್ರತಿಪಾದಿಸಿದ ನಾಯಕರಾದ ಮಹಾತ್ಮಾಗಾಂಧಿ ಮತ್ತು ಜ್ಯೂನಿಯರ್ ಮಾರ್ಟಿನ್ ಲೂಥರ್ ಕಿಂಗ್ ತಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಒಬಾಮಾ ತಿಳಿಸಿದ್ದರು.
ಬರಾಕ್ ಒಬಾಮಾ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿರುವ ಕುರಿತು ಸ್ಕೈ ನ್ಯೂಸ್ ಜೊತೆ ಮಾತನಾಡಿದ ಅವರು, ಒಬಾಮಾ ತುಂಬಾ ಕ್ರಿಯಾಶೀಲರೂ ಹಾಗೂ ತುಂಬಾ ಅರ್ಹ ವ್ಯಕ್ತಿ ಹೌದು. ಆದರೆ ಮದರ್ ತೆರೇಸಾ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಹೋಲಿಸಿದರೆ, ಒಬಾಮಾ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ತುಂಬಾ ಮೊದಲೇ ನೀಡಿದಂತಾಗಿದೆ.
ಮಾರ್ಟಿನ್ ಲೂಥರ್ ಕಿಂಗ್, ತೆರೇಸಾ ಅವರಿಗೆ ಹೋಲಿಸಿದಲ್ಲಿ ಇಷ್ಟು ಬೇಗ ಒಬಾಮಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕಿತ್ತೆ ಎಂದು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ವಿಷಯ ಅದಲ್ಲದಿದ್ದರೂ ಕೂಡ, ಒಬಾಮಾ ಅವರು ಬಹಳ ಸಮರ್ಥರು ಎಂಬುದನ್ನು ತಾನು ತುಂಬಾ ಮನಗಂಡಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.