ನಿಕೋಸಿಯಾ: ಕಳೆದ ವರ್ಷ ಸಾವನ್ನಪ್ಪಿದ್ದ ಸಿಪ್ರಸ್ ಮಾಜಿ ಅಧ್ಯಕ್ಷ ತಾಸೋಸ್ ಪಾಪಡೊಪೌಲಸ್ ಅವರ ಗೋರಿಯನ್ನು ಅಗೆದಿರುವ ದುಷ್ಕರ್ಮಿಗಳು, ಅವರ ಕಳೇಬರವನ್ನು ಕಳವು ಮಾಡಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಈ ಕೃತ್ಯ ನಡೆದಿದೆ ಎಂದು ಇಲ್ಲಿನ ಟೀವಿ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದ್ದು, ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿವೆ.
ಇದೊಂದು ಹೇಯ ಮತ್ತು ಕ್ರೂರ ಕೃತ್ಯ ಎಂದು ಪಾಪಡೊಪೌಲಸ್ ಅವರ ಡಿಕೋ ಪಕ್ಷದ ಈಗಿನ ಮುಖ್ಯಸ್ಥ ಮರಿಯಸ್ ಗಾರೋಯನ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮೆಡಿಟರೇನಿಯನ್ ದ್ವೀಪರಾಷ್ಟ್ರದ ಈಗಿನ ಆಡಳಿತ ಪಕ್ಷ ಎಕೆಇಎಲ್ ಕಮ್ಯೂನಿಸ್ಟ್ ಮುಖ್ಯಸ್ಥ ಆಂಡ್ರೋಸ್ ಕಿಪ್ರಿಯಾನೋ ಕೂಡ ಘಟನೆಯನ್ನು ಖಂಡಿಸಿದ್ದಾರೆ.
2008ರ ಡಿಸೆಂಬರ್ 12ರಂದು ಸಾವನ್ನಪ್ಪಿದ್ದ ಪಾಪಡೊಪೌಲಸ್ ಅವರ ಮೊದಲ ವಾರ್ಷಿಕ ಸ್ಮರಣೆಯ ಒಂದು ದಿನದ ಹಿಂದಷ್ಟೇ ಈ ಘಟನೆ ನಡೆದಿದ್ದು, ಕೃತ್ಯದ ಬಗ್ಗೆ ರಾಷ್ಟ್ರದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಒಂದು ಹೆಣವನ್ನು ಸಮಾಧಿಯೊಳಗಿಂದ ಕದಿಯುವ ಹೀನಾಯ ಕೃತ್ಯವನ್ನು ಎಸಗುವ ವ್ಯಕ್ತಿಗಳು ಎಂಥವರು ಎಂಬ ಬಗ್ಗೆ ತನಗೆ ಅಚ್ಚರಿ ಮೂಡುತ್ತಿದೆ. ಈ ಬಗ್ಗೆ ನಾನು ಹೇಳುವುದೇನಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪಾಪಡೊಪೌಲಸ್ ಅವರ ಕುಟುಂಬ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ತೀವ್ರ ಧೂಮಪಾನಿಯಾಗಿದ್ದ ಈ ಮಾಜಿ ಅಧ್ಯಕ್ಷರು, ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ತನ್ನ 74ನೇ ಹರೆಯದಲ್ಲಿ ಸಾವನ್ನಪ್ಪಿದ್ದರು.