ಪಾಕಿಸ್ತಾನದಲ್ಲಿ ಜಿಹಾದ್ ಬೆನ್ನು ಬಿದ್ದ ಅಮೆರಿಕನ್ ಪ್ರಜೆಗಳು!
ಸರ್ಗೋಧಾ, ಶುಕ್ರವಾರ, 11 ಡಿಸೆಂಬರ್ 2009( 19:10 IST )
ತಾಲಿಬಾನ್ ಪ್ರಾಬಲ್ಯದ ವಾಯುವ್ಯ ಪ್ರಾಂತ್ಯಕ್ಕೆ ಹೋಗಿ ಇಸ್ಲಾಮಿಕ್ ಉಗ್ರರ ಗುಂಪಿಗೆ ಸೇರಲೆತ್ನಿಸಿದ ಯುವ ಅಮೆರಿಕನ್ ಪ್ರಜೆಗಳ ಗುಂಪೊಂದನ್ನು ಎಫ್‌ಬಿಐ ಪಾಕಿಸ್ತಾನದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಇದರ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಎಫ್‌ಬಿಐಗೆ ಸೂಚಿಸಿದ್ದಾರೆ.
ಈ ಐವರು ಅಮೆರಿಕಾದಿಂದ ಪಾಕಿಸ್ತಾನಕ್ಕೆ ಹೇಗೆ ಮತ್ತು ಏಕೆ ಹೋಗಿದ್ದರು ಎಂಬುದನ್ನು ತನಿಖೆ ನಡೆಸಿ, ದೇಶದಲ್ಲೇ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದರೇ ಎಂಬುದನ್ನು ಪತ್ತೆ ಹಚ್ಚಿ ಎಂದು ಒಬಾಮ ತನಿಖಾ ತಂಡಕ್ಕೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ದಕ್ಷಿಣಕ್ಕೆ ಸುಮಾರು 180 ಕಿಲೋ ಮೀಟರ್ ದೂರದಲ್ಲಿರುವ ಸರ್ಗೋಧಾ ಎಂಬಲ್ಲಿ ಐವರನ್ನು ಬಂಧಿಸಲಾಗಿದೆ. ಇವರಲ್ಲಿ ಅಮೆರಿಕನ್ ಪ್ರಜೆಗಳು ಹಾಗೂ ಪಾಕಿಸ್ತಾನಿ-ಅಮೆರಿಕನ್‌ಗಳು ಸೇರಿದಂತೆ ಇತರ ದೇಶದವರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಐವರು ಜಿಹಾದಿ ಸಂಬಂಧಿ ಮಾಹಿತಿಗಳನ್ನು ಯೂಟ್ಯೂಬ್ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಹುಡುಕುತ್ತಾ, ಅಂತಹ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದರು. ಅವರಲ್ಲಿ ಜಿಹಾದ್ ಕುರಿತು ಅತ್ಯಾಸಕ್ತಿಯಿಂದಿರುವುದಲ್ಲದೆ ಕಾರ್ಯಾಚರಣೆ ನಡೆಸಲು ಉತ್ಸುಕತೆ ಹೊಂದಿದ್ದರು ಎಂದು ಸರ್ಗೋಧಾ ಜಿಲ್ಲಾ ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ಸ್ಥಳೀಯ ಟೀವಿ ಚಾನೆಲ್‌ವೊಂದಕ್ಕೆ ವಿವರಣೆ ನೀಡಿದ್ದಾರೆ.
ಇದರೊಂದಿಗೆ ದೇಶದ ಪ್ರಜೆಗಳ ಮೂಲಕವೇ ದುಷ್ಕೃತ್ಯಗಳನ್ನು ಸಂಘಟಿಸುವ ಯತ್ನದತ್ತ ವಿದೇಶಗಳಲ್ಲಿನ ಜಿಹಾದಿ ಗುಂಪುಗಳು ಕಾರ್ಯಪ್ರವೃತ್ತವಾಗುತ್ತಿವೆ. ಅಮೆರಿಕಾದಲ್ಲೇ ಜಿಹಾದ್ ಬಗ್ಗೆ ಒಲವು ಹೆಚ್ಚುತ್ತಿದ್ದು, ಇದರ ಲಾಭವನ್ನು ಉಗ್ರಗಾಮಿ ಸಂಘಟನೆಗಳು ಪಡೆದುಕೊಳ್ಳುತ್ತಿವೆ ಎಂದು ಹೇಳಲಾಗುತ್ತಿರುವ ಇತ್ತೀಚಿನ ವಾದಗಳಿಗೆ ಪುಷ್ಠಿ ಬಂದಂತಾಗಿದೆ.