ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ವಿರುದ್ಧ ದ್ವೇಷದ ಸಂದೇಶಗಳನ್ನು ಕಳಿಸಿ, ಅಮೆರಿಕದ ಮೂಲಸೌಲಭ್ಯದ ಮೇಲೆ ಬಾಂಬ್ ದಾಳಿಗಳನ್ನು ನಡೆಸುವುದಾಗಿ ಕರೆ ನೀಡಿದ ಐಐಟಿ ಹಳೆಯ ವಿದ್ಯಾರ್ಥಿ ವಿಕ್ರಮ್ ಬುದ್ಧಿ ಅವರಿಗೆ ನಾಲ್ಕುವರ್ಷಗಳು ಮತ್ತು 9 ತಿಂಗಳ ಕಾರಾಗೃಹವಾಸ ಶಿಕ್ಷೆ ಮತ್ತು ಹೆಚ್ಚುವರಿಯಾಗಿ ಮೂರುವರ್ಷಗಳ ಮೇಲುಸ್ತುವಾರಿ ಬಿಡುಗಡೆಯನ್ನು ಅಮೆರಿಕ ಕೋರ್ಟ್ ವಿಧಿಸಿದೆ.
ಮೇಲುಸ್ತುವಾರಿ ಬಿಡುಗಡೆಯ ನೇತೃತ್ವವನ್ನು ಪ್ರೊಬೇಷನ್ ಅಧಿಕಾರಿ ವಹಿಸಲಿದ್ದಾರೆಂದು ಇಂಡಿಯಾನ ಕೋರ್ಟ್ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಮೂಡಿ ತಿಳಿಸಿದ್ದಾರೆ. ಬುದ್ಧಿ ಅವರು ಬುಷ್, ಆಗಿನ ಉಪಾಧ್ಯಕ್ಷ ಡಿಕ್ ಚೆನಿ ಮತ್ತು ಅವರಿಬ್ಬರ ಪತ್ನಿಯರಿಗೆ ಬೆದರಿಕೆ ಹಾಕಿದ ಮತ್ತು ಅಮೆರಿಕ ಮೂಲಸೌಲಭ್ಯದ ಮೇಲೆ ಬಾಂಬ್ ದಾಳಿಗೆ ಕರೆ ನೀಡಿದ ಆರೋಪದ ಮೇಲೆ 2006ರಲ್ಲಿ ಬಂಧಿಸಲಾಗಿತ್ತು.
ಪುರ್ಡು ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಯಾದ 38 ವರ್ಷ ವಯಸ್ಸಿನ ಬುದ್ಧಿ ಅವರಿಗೆ 2007ರಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಆರೋಪದ ವಿಚಾರಣೆ ಆರಂಭವಾದ ಬಳಿಕ ಅವರ ವಕೀಲರನ್ನು ಶುಕ್ರವಾರ ಕಿತ್ತುಹಾಕಿದ್ದರು. ಅವರು ಕೋರ್ಟ್‌ನಲ್ಲಿ ಸ್ವತಃ ಹಾಜರಾಗಿ ವಿಚಾರಣೆ ಅನ್ಯಾಯದಿಂದ ಕೂಡಿದ್ದು, ಸರ್ಕಾರ ಬಿಂಬಿಸಲು ಪ್ರಯತ್ನಿಸುವಂತ ವ್ಯಕ್ತಿ ತಾವಲ್ಲ ಎಂದು ಹೇಳಿದ್ದಾರೆ.
ಶಿಕ್ಷೆಯ ತೀರ್ಪು ಪ್ರಕಟವಾದ ಬಳಿಕ, ಕಿತ್ತಲೆ ಬಣ್ಣದ ಕಾರಾಗೃಹ ಜಂಪ್‌ಸೂಟ್ ಧರಿಸಿದ್ದ ಬುದ್ಧಿ, ತಮ್ಮ ಮಾಜಿ ವಕೀಲರ ಜತೆ ಸ್ವಲ್ಪ ಕಾಲ ಮಾತನಾಡಿದರು. ಬಳಿಕ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಕೋರ್ಟ್‌ರೂಂ ಹೊರಗೆ ಒಯ್ಯಲಾಯಿತು. 10 ದಿನಗಳೊಳಗೆ ಬುದ್ಧಿ ಅವರಿಗೆ ತೀರ್ಪಿನ ವಿರುದ್ಧ ಚಿಕಾಗೊ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸುವ ಅಧಿಕಾರವಿದೆ.