ಇರಾಕ್ ವಿರುದ್ಧ ಆಕ್ರಮಣವನ್ನು ಮಾಜಿ ಬ್ರಿಟನ್ ಪ್ರಧಾನಮಂತ್ರಿ ಟೋನಿ ಬ್ಲೇರ್ ಸಮರ್ಥಿಸಿಕೊಂಡಿದ್ದಾರೆ. ಸದ್ದಾಂ ಹುಸೇನ್ ಅವರ ಬಳಿ ಸಮೂಹ ವಿನಾಶಕ ಅಸ್ತ್ರಗಳ ಸಾಕ್ಷ್ಯಾಧಾರ ಸಿಕ್ಕಿರದಿದ್ದರೂ ಅವರನ್ನು ಪದಚ್ಯುತಗೊಳಿಸಿದ್ದು ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನವರಿ ಪೂರ್ವದಲ್ಲಿ ಪ್ರಸಕ್ತ ಇರಾಕ್ ಯುದ್ಧದ ವಿಚಾರಣೆಗೆ ಹಾಜರಾಗಬೇಕಿರುವ ಬ್ಲೇರ್, ಇರಾಕ್‌ನಿಂದ ಆ ವಲಯಕ್ಕೆ ಬೆದರಿಕೆಯ ಪರಿಕಲ್ಪನೆಯಿಂದ 2003ರಲ್ಲಿ ಇರಾಕ್ ವಿರುದ್ಧ ಆಕ್ರಮಣದ ಪರವಾಗಿ ತಮ್ಮನ್ನು ವಾಲುವಂತೆ ಮಾಡಿತು ಎಂದು ಹೇಳಿದ್ದಾರೆ.
ಸದ್ದಾಂ ಹುಸೇನ್ ಆದೇಶ ಮಾಡಿದ 45 ನಿಮಿಷಗಳಲ್ಲಿ ಇರಾಕ್ ಸಮೂಹ ವಿನಾಶಕ ಅಸ್ತ್ರಗಳನ್ನು ಬಳಸುವ ಸಾಧ್ಯತೆಯಿತ್ತು ಎಂದು ಬ್ರಿಟನ್ ಸರ್ಕಾರ ಸೆಪ್ಟೆಂಬರ್ 2002ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿತ್ತು.ಬಿಬಿಸಿಯ ಒನ್ಸ್ ಫರ್ನ್ ಮೀಟ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ, ಸಮೂಹ ವಿನಾಶಕ ಅಸ್ತ್ರಗಳು ಇಲ್ಲವೆಂದು ಆಗ ತಿಳಿದುಬಂದಿದ್ದರೂ, ಆಕ್ರಮಣ ಯೋಜನೆಯನ್ನು ಮುಂದುವರಿಸುತ್ತಿದ್ದರೇ ಎಂದು ಬ್ಲೇರ್ ಅವರನ್ನು ಕೇಳಲಾಗಿತ್ತು.