ಜೋಹಾನ್ಸ್ಬರ್ಗ್, ಭಾನುವಾರ, 13 ಡಿಸೆಂಬರ್ 2009( 15:12 IST )
PTI
ಜಿಬ್ರಾಲ್ಟರ್‌ನ ಕಯಾನೆ ಆಲ್ಡೊರಿನೊ ಅವರು ಪ್ರಸಕ್ತ ಸಾಲಿನ 'ವಿಶ್ವ ಸುಂದರಿ' ಪಟ್ಟ ಅಲಂಕರಿಸಿದ್ದಾರೆ. ಶನಿವಾರ ರಾತ್ರಿ ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿಶ್ವದಾದ್ಯಂತದಿಂದ ಸ್ಪರ್ಧಿಸಿದ್ದ 111 ಹುರಿಯಾಳುಗಳನ್ನು ಹಿಂದಿಕ್ಕಿ ವಿಶ್ವ ಸುಂದರಿ-2009ರ ಪಟ್ಟದ ಕಿರೀಟ ತಮ್ಮ ಮುಡಿಗೇರಿಸಿಕೊಂಡರು.
ಆದರೆ ಈ ಸಂದರ್ಭದಲ್ಲಿ ಮಿಸ್ ಇಂಡಿಯಾ ಪೂಜಾ ಛೋಪ್ರಾ ಅಂತಿಮ ಸುತ್ತಿಗೂ ಬಾರದೆ ಭಾರತೀಯರಿಗೆ ತೀವ್ರ ನಿರಾಸೆ ಉಂಟು ಮಾಡಿದರು. ಏಳು ಚೆಲುವೆಯರ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ಮಿಸ್ ಮೆಕ್ಸಿಕೊ ಪರ್ಲ್ ಬೆಲ್ಟ್ರಾನ್ ದ್ವಿತೀಯ ಹಾಗೂ ದಕ್ಷಿಣ ಆಫ್ರಿಕಾದ ತಾತುಂ ಕೇಶ್ವರ್ ಮೂರನೇ ರನ್ನರ್ ಅಪ್‌ಗಳಾಗಿ ತಾವೂ ಸುಂದರಿಯರು ಎಂಬುದನ್ನು ಸಾಬೀತುಪಡಿಸಿದರು.
ಉಳಿದಂತೆ ಕೆನಡಾ, ಕೊಲಂಬಿಯ, ಪನಾಮ ಮತ್ತು ಫ್ರಾನ್ಸ್‌ನ ಸುಂದರಿಯರ ನಡುವಿನ ಸೆಣಸಾಟದ ತೀರ್ಪುಗಾರರಲ್ಲಿ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರ ಸಹ ಒಬ್ಬರಾಗಿದ್ದರು.
ಪ್ರಥಮ ಬಾರಿಗೆ ದೇಶಕ್ಕೆ ವಿಶ್ವಸುಂದರಿ ಪಟ್ಟ ದೊರಕಿಸಿಕೊಟ್ಟ ಹೆಮ್ಮೆಯಿಂದ ಬೀಗುತ್ತಿದ್ದ 22ವರ್ಷದ ಕಯಾನೆ ಅವರಿಗೆ ಕಳೆದ ವರ್ಷದ ವಿಶ್ವದ ಸುಂದರಿ ರಷ್ಯಾದ ಸೆನಿಯಾಸುಖಿ ನೋವಾ ಕಿರೀಟಧಾರಣೆ ಮಾಡಿದರು.