ಲಷ್ಕರ್ ಇ ತೋಯ್ಬಾ ಮತ್ತು ಜೈಶ್ ಇ ಮೊಹಮ್ಮದ್ ಮುಂತಾದ ಜಿಹಾದಿ ಉಗ್ರಗಾಮಿಗಳ ಗುಂಪುಗಳಿಗೆ ಪಾಕಿಸ್ತಾನ ಸೇನೆಯ ಒಂದು ಗುಂಪು ಸಹಕಾರ ನೀಡುತ್ತಿದೆ ಎಂಬುದನ್ನು ಲಷ್ಕರೆ ಉಗ್ರ ದಾವೂದ್ ಗಿಲಾನಿ ಯಾನೆ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ವಿಚಾರಣೆ ನಡೆಸುತ್ತಿರುವ ಎಫ್‌ಬಿಐ ಖಚಿತಪಡಿಸಿದೆ.
ಭಾರತದ ವಿರುದ್ಧ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಮತ್ತು ಯೋಜನೆಗಳನ್ನು ರೂಪಿಸಲು ಉಗ್ರಗಾಮಿಗಳೊಂದಿಗೆ ಪಾಕಿಸ್ತಾನದ ಸೇನೆಯ ಅಧಿಕಾರಿಗಳು ಸಹಕರಿಸುತ್ತಿದ್ದರು ಎಂದು ಹೆಡ್ಲಿ ವಿಚಾರಣೆ ಸಂದರ್ಭದಲ್ಲಿ ಎಫ್‌ಬಿಐ ಅಧಿಕಾರಿಗಳಿಗೆ ಹೇಳಿದ್ದಾನೆಂದು ಮೂಲಗಳು ಹೇಳಿವೆ.
ಹೆಡ್ಲಿ ವಿಚಾರಣೆ ಸಂಬಂಧ ಮಾಹಿತಿ ಕಲೆ ಹಾಕಲು ಭಾರತಕ್ಕೆ ಬಂದಿರುವ ಎಫ್‌ಬಿಐ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳಿಗೆ ಈ ಸಂಬಂಧ ಮಾಹಿತಿಗಳನ್ನು ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಇಂತಹ ಆರೋಪಗಳಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ, ಅವರನ್ನು ಉನ್ಮಾದಿತರು ಎಂದಷ್ಟೇ ಕರೆದಿತ್ತು. ಜಿಹಾದಿ ಗುಂಪುಗಳೊಂದಿಗೆ ಮತ್ತು ಭಾರತ ವಿರುದ್ಧದ ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಕಿಸ್ತಾನದ ಸರಕಾರಿ ಅಧಿಕಾರಿಗಳು ಸಹಯೋಗ ಹೊಂದಿರುವುದು ಹೆಡ್ಲಿ ನೀಡಿದ ಮಾಹಿತಿಯೊಂದಿಗೆ ಬಯಲಾದಂತಾಗಿದೆ.
ಹೆಡ್ಲಿ ಹೇಳಿರುವ ಅಧಿಕಾರಿಗಳು ಲಷ್ಕರ್ ಜತೆಗೆ ಭಾರತ ವಿರುದ್ಧದ ಬೃಹತ್ ಆಂದೋಲನ 'ಕರಾಚಿ ಯೋಜನೆ'ಯಲ್ಲಿ ಕೈ ಜೋಡಿಸಿದ್ದರು. ಇಲ್ಲಿ ಭಾರತದಿಂದ ಗಡಿಪಾರಾದವರು ಅಥವಾ ದೇಶಭ್ರಷ್ಟರೆನಿಸಿಕೊಂಡವರಿಗೆ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದತ್ತ ಆಕರ್ಷಿತರಾಗುವಂತೆ ಮಾಡಲು ತರಬೇತಿ ನೀಡಲಾಗುತ್ತಿತ್ತು.
ಭಾರತದ ಮೂಲದ ಯುವಕರನ್ನು ಜಿಹಾದಿ ಗುಂಪುಗಳಿಗಾಗಿ ಲಷ್ಕರ್ ಜತೆ ಪಾಕಿಸ್ತಾನ ಸೇನೆಯು ತರಬೇತಿಗೊಳಿಸಿ ಬಳಿಕ ಭಾರತಕ್ಕೆ ಕಳುಹಿಸುತ್ತದೆ. ಆ ಮೂಲಕ ಭಾರತದಲ್ಲಿ ನಡೆಯುವ ಉಗ್ರಗಾಮಿ ಕೃತ್ಯಗಳಲ್ಲಿ ಪಾಕಿಸ್ತಾನದ ಕೈವಾಡವಿಲ್ಲ, ಅದು ಭಾರತದವರದ್ದೇ ಕೃತ್ಯ ಎಂದು ಬಿಂಬಿಸುವ ತಂತ್ರಗಾರಿಕೆ ಪಾಕಿಸ್ತಾನದ್ದು ಎಂಬುದನ್ನು ಎಫ್‌ಬಿಐ ಅಧಿಕಾರಿಗಳು ಹೆಡ್ಲಿಯಿಂದ ತಿಳಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.