ಇಟಲಿಯ ನಗರವಾದ ಮಿಲನ್‌ನಲ್ಲಿ ಭಾನುವಾರ ಸಭೆಯೊಂದರಲ್ಲಿ ಭಾಗವಹಿಸಿ ಇಟಲಿ ಪ್ರಧಾನಿ ಸಿಲ್ವಿವೊ ಬೆರುಲುಸ್ಕೋನಿ ಹೊರ ಆಗಮಿಸಿದ್ದ ವೇಳೆ ಮಾನಸಿಕ ಅಸ್ವಸ್ಥನೊಬ್ಬ ಏಕಾಏಕಿ ದಾಳಿ ನಡೆಸಿ ಮುಖಕ್ಕೆ ಗುದ್ದಿದ ಪರಿಣಾಮ ಪ್ರಧಾನಿಯ ಎರಡು ಹಲ್ಲು ಉದುರಿಹೋಗಿರುವ ಘಟನೆ ನಡೆದಿದೆ.
ಪ್ರಧಾನಿ ಬೆರುಲುಸ್ಕೋನಿ ಅವರ ಮುಖಕ್ಕೆ ಹೊಡೆದ ಪರಿಣಾಮ ಮೇಲ್ ತುಟಿ ಒಡೆದು ರಕ್ತದ ಕೋಡಿ ಹರಿದಿತ್ತು. ಅಲ್ಲದೇ ಎರಡು ಹಲ್ಲುಗಳು ಕೂಡ ಉದುರಿಹೋಗಿತ್ತು. ಕೂಡಲೇ ಪ್ರಧಾನಿ ಅವರನ್ನು ಮಿಲಾನ್ಸ್‌ನ ಸ್ಯಾನ್ ರಾಫೆಲ್ಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಅವರ ಮೇಲೆ ಹಲ್ಲೆ ನಡೆಸಿದಾತನನ್ನು 40ರ ಹರೆಯದ ಮಾಸ್ಸಿಮೋ ಟಾರ್ಟ್‌ಗ್ಲಿಯಾ ಎಂದು ಗುರುತಿಸಲಾಗಿದೆ. ಈತ ಕಳೆದ ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ಪೀಪಲ್ ಆಫ್ ಪ್ರೀಡಂ ಪಕ್ಷದ ರಾಲಿಯನ್ನು ಮುಗಿಸಿ ವಾಪಸ್ಸಾಗುತ್ತಿದ್ದ 73ರ ಹರೆಯದ ಪ್ರಧಾನಿ ಮೇಲೆ ಹಲ್ಲೆ ನಡೆಸಿದ್ದ.
ಆದರೆ ಆತ ಪ್ರಧಾನಿಯವರ ಮೇಲೆ ಯಾಕಾಗಿ ಹಲ್ಲೆ ನಡೆಸಿದ್ದಾನೆ ಎಂಬ ವಿವರ ಲಭ್ಯವಾಗಿಲ್ಲ. ಘಟನೆಯಲ್ಲಿ ಗಾಯಗೊಂಡಿರುವ ಪ್ರಧಾನಿ ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.