ಕಳೆದ ವರ್ಷದ ಮುಂಬೈ ದಾಳಿಗೆ ಮುನ್ನ ಭಾರತಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದಷ್ಟೇ ಅಲ್ಲದೆ, ದಾಳಿಕೋರ ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಕುಳಿತು ನಿರ್ದೇಶನಗಳನ್ನು ನೀಡುತ್ತಿದ್ದುದು ಇದೀಗ ಎಫ್‌ಬಿಐ ವಶದಲ್ಲಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ಉಗ್ರಗಾಮಿಗಳು ಮನಬಂದಂತೆ ದಾಳಿ ನಡೆಸುತ್ತಿರುವಾಗ ಗಿಲಾನಿ ಪಾಕಿಸ್ತಾನದಲ್ಲಿದ್ದ. ಅಲ್ಲಿನ ಉಗ್ರರ ಪ್ರಧಾನ ನಿಯಂತ್ರಣ ಕೊಠಡಿಯಿಂದ ಭಾರತದಲ್ಲಿದ್ದ ಉಗ್ರರಿಗೆ ಆತ ಮಾರ್ಗದರ್ಶನ ನೀಡುತ್ತಿದ್ದ ಎಂದು ಎಫ್‌ಬಿಐ ಭಾರತದ ತನಿಖಾ ವಿಭಾಗಕ್ಕೆ ಮಾಹಿತಿ ನೀಡಿದೆ.
ಕರಾಚಿಯಲ್ಲಿನ ಲಷ್ಕರ್ ಇ ತೋಯ್ಬಾ ನಿಯಂತ್ರಣ ಕೊಠಡಿಯಲ್ಲಿ ನಿಪುಣ ಪಾತಕಿಗಳಾದ ಜಾಕಿರ್ ರೆಹಮಾನ್ ಲಖ್ವಿ ಮತ್ತು ಝಾರರ್ ಶಾ ಜತೆ ಕುಳಿತಿದ್ದ ಹೆಡ್ಲಿ, ಮುಂಬೈಯ ವಿವಿಧೆಡೆ ಗುಂಡಿನ ಮಳೆಗರೆಯುತ್ತಿದ್ದ ಉಗ್ರರು ಗಮ್ಯ ಸ್ಥಾನ ತಲುಪಲು ಪೂರಕ ಮಾಹಿತಿಗಳನ್ನು ನೇರವಾಗಿ ರವಾನಿಸುತ್ತಿದ್ದ.
ಹೊಟೇಲ್ ತಾಜ್, ಒಬೆರಾಯ್, ಟ್ರಿಂಡೆಟ್ ಟವರ್ ಮತ್ತು ನಾರಿಮನ್ ಹೌಸ್‌ಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಕುರಿತು ನೇರವಾಗಿ ಮೊಬೈಲ್ ಮತ್ತು ಸ್ಯಾಟಲೈಟ್ ಫೋನ್‌ಗಳ ಮೂಲಕ ಹೆಡ್ಲಿ ಮಾಹಿತಿ ನೀಡುತ್ತಿದ್ದ. ಇದರ ಆಧಾರದಿಂದಲೇ ಉಗ್ರರು ಅತಿ ವೇಗದಿಂದ ಗುರಿಯನ್ನು ತಲುಪಿ ಹೆಚ್ಚಿನ ದುಷ್ಕೃತ್ಯ ನಡೆಸಲು ಸಾಧ್ಯವಾಗಿತ್ತು ಎಂದು ಮೂಲಗಳು ಹೇಳಿವೆ.
ಇದೀಗ ಹೆಡ್ಲಿಯ ಧ್ವನಿ ಮಾದರಿಯನ್ನು ಎಫ್‌ಬಿಐಯಿಂದ ಭಾರತ ಕೇಳಿದ್ದು, ಇದಕ್ಕೆ ಅಮೆರಿಕಾ ಯಾವುದೇ ಆಶ್ವಾಸನೆ ನೀಡಿಲ್ಲ. ದಾಳಿಯ ಸಂದರ್ಭದಲ್ಲಿ ಉಗ್ರರು ಮತ್ತು ಸೂತ್ರಧಾರಿಗಳ ನಡುವೆ ನಡೆದ ಮಾತುಕತೆಯ ಧ್ವನಿಮುದ್ರಿಕೆ ಭಾರತದ ಬಳಿ ಇದೆಯಾದರೂ, ಅದು ಯಾರ‌್ಯಾರದು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಹೆಡ್ಲಿ ಧ್ವನಿ ಮಾದರಿ ಸಿಕ್ಕಲ್ಲಿ ಅದನ್ನು ಪರಿಹರಿಸಬಹುದಾಗಿದೆ ಎಂದು ಭಾರತದ ತನಿಖಾ ದಳ ಅಭಿಪ್ರಾಯಪಟ್ಟಿದೆ.
ಮುಂಬೈ ದಾಳಿಗೂ ಮೊದಲು ಪೂರ್ವತಯಾರಿಯಂಗವಾಗಿ ಹೆಡ್ಲಿ ಹಲವು ಕಡೆ ಸುತ್ತಾಡಿ ಅಪೂರ್ವ ಮಾಹಿತಿಗಳನ್ನು ಕಲೆ ಹಾಕಿದ್ದ. ಈ ಸಂದರ್ಭದಲ್ಲಿ ಅಗತ್ಯ ಸ್ಥಳಗಳ ವಿಡಿಯೋ ಚಿತ್ರೀಕರಣವನ್ನು ಕೂಡ ಆತ ಮಾಡಿದ್ದ ಎಂದು ಎಫ್‌ಬಿಐ ಮೂಲಗಳು ಹೇಳಿವೆ.