ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ, ರಾಣಾ ವೀಸಾ ದಾಖಲೆ ನಾಪತ್ತೆ; ಅಮೆರಿಕಾ ಕೈವಾಡ? (visa papers | India | Chicago consulate | David Coleman Headley)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಸಂಚಿನಲ್ಲಿ ಭಾಗವಹಿಸಿದ್ದಾರೆ ಎಂದು ಅಮೆರಿಕಾ ಆರೋಪಿಸಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿ ಮತ್ತು ತಹಾವುರ್ ಹುಸೈನ್ ರಾಣಾ ಎಂಬವರಿಗೆ ನೀಡಲಾಗಿದ್ದ ವೀಸಾಗಳ ದಾಖಲೆಗಳು ಚಿಕಾಗೋದ ಭಾರತೀಯ ದೂತವಾಸ ಕಚೇರಿಯಿಂದ ಕಾಣೆಯಾಗಿರುವ ಗಂಭೀರ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಶಂಕಿತ ಉಗ್ರರ ನಂಟು ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ.

ಇವರಲ್ಲಿ ಹೆಡ್ಲಿ ಅಮೆರಿಕಾದ ಏಜೆಂಟ್ ಆಗಿಯೂ ಆರಂಭದಲ್ಲಿ ಕೆಲಸ ಮಾಡಿದ್ದ. ಬಳಿಕ ಆತ ಲಷ್ಕರ್ ಇ ತೋಯ್ಬಾದ ಪರವಾಗಿಯೂ ಕಾರ್ಯನಿರ್ವಹಿಸಲು ಆರಂಭಿಸಿದ್ದ ಎಂದು ಹೇಳಲಾಗಿದ್ದು, ಈತ ಡಬ್ಬಲ್ ಏಜೆಂಟ್ ಆಗಿದ್ದ ಎಂಬ ಆರೋಪಗಳಿವೆ. ಮುಂಬೈ ದಾಳಿಯ ಕುರಿತು ಈತನಿಗೆ ಪೂರ್ವಮಾಹಿತಿಯಿರುವುದು ಅಮೆರಿಕಾಕ್ಕೆ ತಿಳಿದಿತ್ತು ಎಂಬ ಮಾಹಿತಿಯೂ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಹಾಗಾಗಿ ವೀಸಾ ನಾಪತ್ತೆ ಹಿಂದೆ ಅಮೆರಿಕಾದ ಕೈವಾಡವಿರಬಹುದು ಎಂಬ ಸಂಶಯಗಳೂ ಕಾಣತೊಡಗಿವೆ.

ಅವರಿಬ್ಬರ ವೀಸಾಗಳು ಕಾಣೆಯಾಗಿರುವ ವಾಸ್ತವಾಂಶದ ವರದಿ ನಮ್ಮ ಪ್ರಧಾನ ದೂತವಾಸ ಕಚೇರಿಯಿಂದ ಈಗಷ್ಟೇ ಬಂದಿದೆ ಎಂದು ಬುಧವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಿಳಿಸಿದ್ದಾರೆ.

ಭಾರತಕ್ಕೆ ಪ್ರಯಾಣಿಸಲು ರಾಣಾ ಮತ್ತು ಹೆಡ್ಲಿಗೆ ಚಿಕಾಗೋದಲ್ಲಿನ ಭಾರತೀಯ ದೂತವಾಸ ಕಚೇರಿ ವೀಸಾಗಳನ್ನು ನೀಡಿತ್ತು. ಇವರಿಬ್ಬರೂ 2006ರಿಂದ 2008ರ ನಡುವೆ ಭಾರತದ ಅನೇಕ ನಗರಗಳಿಗೆ ಹಲವು ಬಾರಿ ಪ್ರಯಾಣಿಸಿದ್ದರು.

ಕಳೆದ ವರ್ಷದ ನವೆಂಬರ್ ಮುಂಬೈ ದಾಳಿಯಲ್ಲಿ ಹೆಡ್ಲಿ ಮತ್ತು ರಾಣಾ ಪಾತ್ರವೆಷ್ಟು ಎಂಬ ಕುರಿತು ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಅವರಿಗೆ ನೀಡಲಾದ ವೀಸಾ ಅರ್ಜಿ ಪ್ರಕ್ರಿಯೆಯ ಕುರಿತು ತನಿಖೆ ನಡೆಸುತ್ತಿದೆ.

ಅದೇ ಹೊತ್ತಿಗೆ ಅಮೆರಿಕಾವು ಭಾರತಕ್ಕೆ ತನಿಖೆ ಸಂದರ್ಭದಲ್ಲಿ ಅತ್ಯುತ್ತಮ ಸಹಕಾರವನ್ನು ನೀಡುತ್ತಿದೆ. ಯಾವುದೇ ಸಮಯದಲ್ಲಿ ಬೇಕಾದರೂ ನಮ್ಮ ಸಹಕಾರ ಇದ್ದೇ ಇದೆ ಎಂದು ಅವರು ತಿಳಿಸಿದ್ದಾರೆಂದು ಎಂದು ರಾವ್ ಮಾಹಿತಿ ನೀಡಿದರು.

ವೀಸಾ ಸಂಬಂಧಿ ದಾಖಲೆಗಳು ಕಾಣೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಚಿಕಾಗೋ ಕಚೇರಿಯಲ್ಲಿನ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ ತಕ್ಷಣ ವಾಷಿಂಗ್ಟನ್‌ಗೆ ಬರುವಂತೆ ರಾವ್ ಸೂಚಿಸಿದ್ದಾರೆ.

ಹೆಡ್ಲಿ, ರಾಣಾ ಮತ್ತು ಆತನ ಪತ್ನಿ ಭಾರತಕ್ಕೆ ಬಹುದೇಶೀಯ ವೀಸಾ ಮೂಲಕ ಸುಲಭವಾಗಿ ಪ್ರವೇಶಿಸಲು ಹೇಗೆ ಸಾಧ್ಯವಾಯಿತು, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿತ್ತು. ಹಾಗಾಗಿ ವೀಸಾ ದಾಖಲೆಗಳು ಕಾಣೆಯಾಗಿರುವುದು ಭಾರತದ ತನಿಖೆಗೆ ಖಂಡಿತಾ ಹಿನ್ನಡೆ ಎಂದು ವಿದೇಶಾಂಗ ಇಲಾಖೆಯ ಕೆಲವು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ