ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ ವೀಸಾ ದಾಖಲೆಗಳು ಪತ್ತೆಯಾಗಿವೆ: ಚಿಕಾಗೋ ದೂತವಾಸ (VISA | Mumbai attack | Tahawwur Hussain Rana | David Coleman Headley)
Bookmark and Share Feedback Print
 
ಕಾಣೆಯಾಗಿದೆ ಎಂದು ಹೇಳಲಾಗಿದ್ದ ಶಂಕಿತ ಉಗ್ರರಾದ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹಾವುರ್ ಹುಸೈನ್ ರಾಣಾರವರ ಮೂಲ ವೀಸಾ ದಾಖಲೆಗಳು ಪತ್ತೆಯಾಗಿವೆ ಎಂದು ಚಿಕಾಗೋದಲ್ಲಿನ ಭಾರತೀಯ ರಾಯಭಾರ ಕಚೇರಿಯ ನಂಬಲರ್ಹ ಮೂಲಗಳು ಹೇಳಿವೆ.

ಹೆಡ್ಲಿ ಮತ್ತು ರಾಣಾರವರ ವೀಸಾಗಳು ಚಿಕಾಗೋದ ಭಾರತೀಯ ದೂತವಾಸದಿಂದ ಕಾಣೆಯಾಗಿದೆ ಎಂದು ಕೆಲವು ದಿನಗಳ ಹಿಂದೆ ಹೇಳಲಾಗಿತ್ತು. ಸ್ವಲ್ಪ ದಿನಗಳ ಬಳಿಕ ರಾಣಾ ವೀಸಾ ದಾಖಲೆಗಳು ಸಿಕ್ಕಿದ್ದರೂ, ಹೆಡ್ಲಿಯದ್ದು ಪತ್ತೆಯಾಗಿರಲಿಲ್ಲ. ಇದೀಗ ಆತನ ವೀಸಾ ಮೂಲ ದಾಖಲೆಗಳೂ ಕೈ ಸೇರಿವೆ ಎಂದು ಹೇಳಲಾಗಿದೆ.

48ರ ಹರೆಯದ ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ, ಚಿಕಾಗೋ ನಿವಾಸಿ ಹೆಡ್ಲಿಯನ್ನು ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾ ಎಫ್‌ಬಿಐ ಬಂಧಿಸಿತ್ತು. ಮುಂಬೈ ಸೇರಿದಂತೆ ಹಲವೆಡೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಫೋಟೋಗಳು ಹಾಗೂ ವೀಡಿಯೋಗಳನ್ನು ತೆಗೆಯಲು ಆತ ಭಾರತಕ್ಕೆ ಪ್ರಯಾಣಿಸಿದ್ದ ಎಂದು ಹೇಳಲಾಗಿದ್ದು, ಮುಂಬೈ ದಾಳಿಯ ಹಿಂದೆಯೂ ಈತನ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ಮತ್ತೊಬ್ಬ ಬಂಧಿ 49ರ ರಾಣಾ ಕೂಡ ಪಾಕಿಸ್ತಾನ ಮೂಲದವನು. ಕೆನಡಾ ಪ್ರಜೆಯಾಗಿರುವ ಈತನನ್ನು ಇಂತಹುದೇ ಹಲವು ಆರೋಪಗಳ ಮೇಲೆ ಬಂಧಿಸಲಾಗಿದೆ.

ಹೆಡ್ಲಿ ವೀಸಾಕ್ಕಾಗಿ 2006ರ ಜೂನ್ 30ರಂದು ಸಲ್ಲಿಸಿದ್ದ ಮೂಲ ಅರ್ಜಿ ಸೇರಿದಂತೆ ಆತನಿಂದ ನೀಡಲ್ಪಟ್ಟಿದ್ದ ಇತರ ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ಚಿಕಾಗೋ ದೂತವಾಸದ ಮೂಲಗಳು ಹೇಳಿವೆ.

ಚಿಕಾಗೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿನ ದಾಖಲೆ ಪತ್ರಗಳನ್ನಿಡುವ ಕೊಠಡಿಯಲ್ಲಿ ಎಲ್ಲಾ ವೀಸಾ ದಾಖಲೆಗಳನ್ನು ಗುಡ್ಡೆ ಹಾಕಿದ್ದ ಕಾರಣ ಇದುವರೆಗೆ ಹೆಡ್ಲಿಗೆ ಸಂಬಂಧಪಟ್ಟ ದಾಖಲೆಗಳು ಸಿಕ್ಕಿರಲಿಲ್ಲ. ಆದರೆ ಅದನ್ನು ಇಂದು ಹುಡುಕಿ ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೀಸಾ ದಾಖಲೆಗಳು ಕಾಣೆಯಾಗಿದ್ದ ಹಿನ್ನಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯವು ತನಿಖೆಗೆ ಆದೇಶ ನೀಡಿತ್ತು. ಇದೀಗ ದಾಖಲೆಗಳನ್ನು ಭಾರತಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

2006ರ ಜೂನ್ 30ರಂದು ಹೆಡ್ಲಿ ಸಲ್ಲಿಸಿದ್ದ ವೀಸಾ ಅರ್ಜಿಗೆ ಸ್ಪಂದಿಸಿದ್ದ ಭಾರತೀಯ ರಾಯಭಾರ ಕಚೇರಿ 2007ರಲ್ಲಿ ವೀಸಾ ನೀಡಿತ್ತು. ಆತನಿಗೆ ಉದ್ಯಮ ವೀಸಾವನ್ನು ಐದು ವರ್ಷಗಳ ಅವಧಿಗೆ ನೀಡಲಾಗಿತ್ತು.

ಎಫ್‌ಬಿಐ ಹೆಡ್ಲಿಯನ್ನು ಬಂಧಿಸಿದ ನಂತರ ಭಾರತವು ಆತನ ವೀಸಾವನ್ನು ರದ್ದುಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ