ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ಪ್ರಕರಣ; ವಿಚಾರಣೆ ಮುಂದೂಡಿದ ಪಾಕಿಸ್ತಾನ (Mumbai attack | Pakistan court | Zakiur Rehman Lakhvi | Ajmal Kasab)
Bookmark and Share Feedback Print
 
ಕಳೆದ ವರ್ಷದ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಲಷ್ಕರ್ ಇ ತೋಯ್ಬಾದ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಮಂದಿ ಶಂಕಿತ ಉಗ್ರರ ವಿರುದ್ಧದ ವಿಚಾರಣೆಯನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ಶನಿವಾರ ಡಿಸೆಂಬರ್ 24ಕ್ಕೆ ಮುಂದೂಡಿದೆ.

ಇದೇ ಸಂದರ್ಭದಲ್ಲಿ ದೋಷಾರೋಪಣೆ ವಿರುದ್ಧ ಆರೋಪಿಗಳು ನ್ಯಾಯಾಲಯಕ್ಕೆ ನಾಲ್ಕು ಅರ್ಜಿಗಳನ್ನು ಸಲ್ಲಿಸಿದ್ದು, ತಮ್ಮನ್ನು ಪ್ರಕರಣದಿಂದ ದೋಷಮುಕ್ತಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಭದ್ರತಾ ಕಾರಣಗಳಿಗಾಗಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಶನಿವಾರ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್, ಫಿರ್ಯಾದಿ ಮತ್ತು ರಕ್ಷಣಾ ವಕೀಲರ ವಾದಗಳನ್ನು ಅವರ ಅರ್ಜಿಗಳೊಂದಿಗೆ ಆಲಿಸಿದರು.

ಉಭಯ ಪಕ್ಷಗಳ ವಾದ-ವಿವಾದಗಳು ಮುಕ್ತಾಯಗೊಂಡಿದ್ದು, ನಾವು ಸಲ್ಲಿಸಿರುವ ಅರ್ಜಿಯ ಕುರಿತು ನ್ಯಾಯಾಲಯವು ಮುಂದಿನ ವಿಚಾರಣೆ ನಡೆಯಲಿರುವ ಡಿಸೆಂಬರ್ 24ರಂದು ತೀರ್ಪು ನೀಡುವ ಸಾಧ್ಯತೆಗಳಿವೆ ಎಂದು ಉಗ್ರ ಲಖ್ವಿ ವಕೀಲ ಖ್ವಾಜಾ ಸುಲ್ತಾನ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಮುಂಬೈ ದಾಳಿ ಸಂಬಂಧ ಭಾರತಕ್ಕೆ ಜೀವಂತ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಈ ಹಿಂದೆ ತಾನು ಭಾಗಿಯಾಗಿದ್ದೇನೆ ಎಂದು ತಪ್ಪೊಪ್ಪಿಗೆ ನೀಡಿದ್ದನ್ನು ವಾಪಸ್ ಪಡೆದುಕೊಂಡಿರುವುದನ್ನು ಕೂಡ ರಕ್ಷಣಾ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಮುಂಬೈ ನ್ಯಾಯಾಲಯದಲ್ಲಿ ಶುಕ್ರವಾರ ಕಸಬ್ ತನ್ನ ತಪ್ಪೊಪ್ಪಿಗೆ ಹೇಳಿಕೆಗಳನ್ನು ವಾಪಸ್ ಪಡೆದುಕೊಂಡಿದ್ದ.

ಕಸಬ್ ತಪ್ಪೊಪ್ಪಿಗೆ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿರುವುದರಿಂದ ಪಾಕಿಸ್ತಾನದಲ್ಲಿ ಸೆರೆ ಹಿಡಿಯಲಾದ ಆರೋಪಿಗಳ ವಿರುದ್ಧದ ಯಾವುದೇ ಆರೋಪಗಳಿಗೆ ಹುರುಳಿಲ್ಲದಂತಾಗಿದೆ ಎಂದು ಸುಲ್ತಾನ್ ಹೇಳಿದ್ದಾರೆ.

ಅಲ್ಲದೆ ಕಸಬ್ ಪ್ರಕರಣದಿಂದ ಪಾಕಿಸ್ತಾನದ ಆರೋಪಿತರ ಪ್ರಕರಣದಿಂದ ಬೇರ್ಪಡಿಸಲು ನ್ಯಾಯಾಲಯ ನಿರ್ಧರಿಸಿರುವುದರ ವಿರುದ್ಧ ಕೂಡ ತಮ್ಮ ಮನವಿಗಳಲ್ಲಿ ಆರೋಪಿಗಳು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ