ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಮಿಳು ಯುವತಿಯರಿಗೆ ಲಂಕಾದಲ್ಲಿ ಲೈಂಗಿಕ ಕಿರುಕುಳ? (Sri Lanka | Military | LTTE | Tamil girls)
Bookmark and Share Feedback Print
 
ಎಲ್‌ಟಿಟಿಇ ವಿರುದ್ಧದ ಸಮರದ ಸಂದರ್ಭದಲ್ಲಿ ಮತ್ತು ನಂತರ ನಿರಾಶ್ರಿತರ ಶಿಬಿರಗಳಲ್ಲಿ ತಮಿಳು ಯುವತಿಯರಿಗೆ ಶ್ರೀಲಂಕಾ ಸೇನೆಯು ಲೈಂಗಿಕ ಕಿರುಕುಗಳಗಳನ್ನು ನೀಡುತ್ತಿತ್ತು, ಆಹಾರಕ್ಕಾಗಿ ಸೆಕ್ಸ್ ಎಂಬ ನಿಲುವನ್ನು ಅಧಿಕಾರಿಗಳು ಪ್ರದರ್ಶಿಸುತ್ತಿದ್ದರು ಎಂದು ಬ್ರಿಟೀಷ್ ಪತ್ರಿಕೆಯೊಂದು ವರದಿ ಮಾಡಿದೆ.

ಈ ಸಂದರ್ಭದಲ್ಲಿ ಎಲ್‌ಟಿಟಿಇ ಜತೆ ಸಂಬಂಧ ಹೊಂದಿದ್ದ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದ ಸೇನೆ ಅವರನ್ನು ಮರಳಿಸಿಲ್ಲ, ಹಲವರು ಕಾಣೆಯಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. ನಿರಾಶ್ರಿತ ಶಿಬಿರದಿಂದ ತಪ್ಪಿಸಿಕೊಂಡು ಬಂದಿರುವ ವ್ಯಕ್ತಿಯೊಬ್ಬ ಈ ಆರೋಪಗಳನ್ನು ಮಾಡಿದ್ದಾರೆ.

ಇದೇ ಆರೋಪವನ್ನು ಕೆಲ ಸಮಯದ ಹಿಂದೆ ಮಾನವ ಹಕ್ಕು ಸಂಘಟನೆಗಳು ಮಾಡಿದ್ದವಾದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪತ್ರಿಕೆ ಉಲ್ಲೇಖಿಸಿದ್ದು, ನಿರಾಶ್ರಿತ ಶಿಬಿರದಲ್ಲಿನ ತಮಿಳನೊಬ್ಬನ ಹೇಳಿಕೆಯನ್ನು ಪ್ರಕಟಿಸಿದೆ.

ತಮಿಳು ಮಹಿಳೆಯರು ಆಹಾರ ಪಡೆಯಬೇಕಾದರೆ ಸೇನೆಯ ಸಿಬ್ಬಂದಿಗಳ ಕಾಮ ತೃಷೆಯನ್ನು ತಣಿಸಬೇಕಾಗಿತ್ತು. ಅಲ್ಲದೆ ಸೆರೆಯಾಳುಗಳು ಗಂಟೆಗಟ್ಟಲೆ ಬಿಸಿಲಲ್ಲಿ ಮಂಡಿಯೂರಬೇಕಾಗಿತ್ತು ಎಂದು ನಾಲ್ಕು ತಿಂಗಳ ಕಾಲ ನಿರಾಶ್ರಿತರ ಶಿಬಿರದಲ್ಲಿ ಇತರ ಹಲವರೊಂದಿಗೆ ಬಂಧಿಯಾಗಿದ್ದ, ಬಳಿಕ ತಪ್ಪಿಸಿಕೊಂಡು ಬಂದಿರುವ 25ರ ಹರೆಯದ ವನ್ಯ ಕುಮಾರ್ ವಿವರಿಸಿದ್ದಾರೆ.

ನಿರಾಶ್ರಿತ ಶಿಬಿರಗಳಲ್ಲಿದ್ದವರು ಪರಸ್ಪರ ಮಾತನಾಡಿಕೊಳ್ಳಲು ಅಥವಾ ಆವರಣ ಗೋಡೆಯ ಬಳಿ ಸುಳಿಯಲು ಕೂಡ ಅವಕಾಶ ನೀಡುತ್ತಿರಲಿಲ್ಲ. ನಾನು ನೋಡಿದಂತೆ ಇಲ್ಲಿ ಲೈಂಗಿಕ ಕಿರುಕುಳವೆನ್ನುವುದು ಒಂದು ಸಾಮಾನ್ಯ ವಿಚಾರವಾಗಿತ್ತು ಎಂದು ಕುಮಾರ್ ತಿಳಿಸಿದ್ದಾರೆ.

ಮಿಲಿಟರಿ ಅಧಿಕಾರಿಗಳು ತಮಿಳು ಹುಡುಗಿಯರನ್ನು ಮುಟ್ಟಿ ಏನು ಮಾಡಿದರೂ ಯಾರು ಕೂಡ ಬಾಯೆತ್ತುವಂತಿರಲಿಲ್ಲ. ಹುಡುಗಿಯರು ತಿರುಗಿ ಮಾತನಾಡಲು ಅವಕಾಶವೇ ಇರಲಿಲ್ಲ. ಹಾಗೆಲ್ಲಾದರೂ ಮಾತಿಗಿಳಿದರೆ ತಮ್ಮ ಜೀವಕ್ಕೆ ಹಾನಿಯಾದೀತು ಎಂಬ ಭೀತಿ ಅವರಲ್ಲಿತ್ತು ಎಂದು ವಿವರಣೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ, ಲೈಂಗಿಕ ಕಿರುಕುಳ ಕುರಿತು ವಿಶ್ವಸಂಸ್ಥೆಯ ಸಂಘಟನೆಗಳು ಆರೋಪ ಮಾಡಿರುವುದು ಹೌದು. ಆದರೆ ಅದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಹೇಳಿದೆ. ಅಲ್ಲದೆ ನಿರಾಶ್ರಿತ ಶಿಬಿರದಲ್ಲಿನ ತಮಿಳರು ಕಾಣೆಯಾಗಿದ್ದಾರೆ ಎಂಬ ವರದಿಗಳನ್ನೂ ಅದು ಅಲ್ಲಗಳೆದಿದೆ.
ಸಂಬಂಧಿತ ಮಾಹಿತಿ ಹುಡುಕಿ