ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಏಸುಕ್ರಿಸ್ತ ಆಡಿ ಬೆಳೆದಿರಬಹುದಾದ ಮನೆ ಇಸ್ರೇಲ್‌ನಲ್ಲಿದೆ! (Jesus-era house | Nazareth | Christmas | Israel)
Bookmark and Share Feedback Print
 
ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ ಎಂದಿರುವಾಗ ಇಸ್ರೇಲ್‌ನ ಪುರಾತತ್ವ ತಜ್ಞರು ಕುತೂಹಲಕಾರಿ ಸುದ್ದಿಯನ್ನು ಹೊರಗೆಡವಿದ್ದಾರೆ. ಇಲ್ಲಿನ ನಜರೆತ್ ಪಟ್ಟಣದಲ್ಲಿ ಏಸುಕ್ರಿಸ್ತ ಬೆಳೆದಿರಬಹುದಾದ ಅಥವಾ ಆ ಕಾಲದ ಮನೆಯೊಂದನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಏಸುಕ್ರಿಸ್ತನ ಕಾಲದ ಮನೆಯೊಂದನ್ನು ಇಸ್ರೇಲ್‌ನಲ್ಲಿ ಮೊತ್ತ ಮೊದಲ ಬಾರಿಗೆ ಪತ್ತೆ ಹಚ್ಚಲಾಗಿದೆ ಎಂದು ಪುರಾತತ್ವ ತಜ್ಞರು ಹೇಳಿಕೊಂಡಿದ್ದು, ಇದು ಕ್ರಿಸ್ತ ಹುಟ್ಟಿ ಬೆಳೆದ ಮನೆ ಎಂದು ಖಚಿತವಾಗಿ ಹೇಳಲು ನಿರಾಕರಿಸಿದ್ದಾರೆ.

ನಜರೆತ್‌ನಲ್ಲಿ ಪತ್ತೆ ಹಚ್ಚಲಾಗಿರುವ ಮನೆಯಲ್ಲೇ ಕ್ರಿಸ್ತನ ತಾಯಿ ಮೇರಿ ತನ್ನ ಬಾಲ್ಯವನ್ನು ಕಳೆದಿದ್ದಳು ಎಂದು ಬಹುತೇಕ ಕ್ರಿಶ್ಚಿಯನ್‌ಗಳು ನಂಬಿದ್ದಾರೆ. ಆದರೆ ಇದೇ ಮನೆಯಲ್ಲಿ ಏಸುಕ್ರಿಸ್ತ ಬೆಳೆದಿದ್ದಾನೆ ಎಂದು ಹೇಳಲು ನಮ್ಮಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ.

ನಜರೆತ್‌ನಲ್ಲಿನ ಚರ್ಚ್ ಪಕ್ಕದಲ್ಲಿ ಉತ್ಖನನ ನಡೆಸುವಂತೆ ಸೂಚಿಸಿದ ಯಾರ್ದೆನ್ನಾ ಅಲೆಕ್ಸಾಂಡ್ರೆ ಎಂಬ ತಜ್ಞರು, ಇಲ್ಲಿ ಎರಡು ಕೊಠಡಿಗಳು ಹಾಗೂ ವಿಶಾಲ ಹೊರಾಂಗಣವಿರುವ ಮೊದಲ ಶತಮಾನದ ಮನೆಯನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.

ನಜರೆತ್‌ನ ಜೆವಿಶ್ ಗ್ರಾಮದಲ್ಲಿ ಮೊತ್ತ ಮೊದಲ ಶತಮಾನದ ಮನೆಯನ್ನು ಪತ್ತೆ ಹಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ರಹಸ್ಯಗಳನ್ನು ಬಯಲಿಗೆಳೆಯಬಹುದಾಗಿದೆ. ನಾವು ಪತ್ತೆ ಹಚ್ಚಿರುವ ಮನೆ ತೀರಾ ಚಿಕ್ಕದು ಮತ್ತು ಇದು ಗುಡಿಸಲಿನಂತಿದೆ; ಇದು ತೀರಾ ಸಾಮಾನ್ಯ ಮತ್ತು ವಿಶಿಷ್ಟ ಮನೆಯಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಆದರೂ ಈ ಮನೆಯ ಸುತ್ತ ಕ್ರಿಸ್ತ ತನ್ನ ಬಾಲ್ಯವನ್ನು ಕಳೆದಿರಬಹುದು. ಸಂಬಂಧಿಗಳು ಮತ್ತು ಗೆಳೆಯರ ಜತೆ ಇದೇ ಪ್ರದೇಶದಲ್ಲಿ ಆಟವಾಡಿರಬಹುದು. ಇದು ಕೇವಲ ನಮ್ಮ ಊಹೆಯಷ್ಟೇ. ಕ್ರಿಸ್ತ ಇಲ್ಲೇ ಓಡಾಡಿದ್ದಾರೆ ಎಂಬ ಕುರಿತು ಸದ್ಯಕ್ಕೆ ನಮ್ಮಲ್ಲಿ ಯಾವುದೇ ಪುರಾವೆಗಳಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ