ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ: ಪ್ರಚಂಡ ಕಿಡಿ (Nepal | India | Maoist | Prachanda)
Bookmark and Share Feedback Print
 
ದೇಶದ ಆಂತರಿಕ ವಿಚಾರಗಳಲ್ಲಿ ಭಾರತ ಮೂಗು ತೂರಿಸುತ್ತಿದೆ ಎಂದು ಆರೋಪಿಸಿರುವ ನೇಪಾಳದ ಮಾವೋವಾದಿ ನಾಯಕ ಪುಷ್ಪ ಕಮಾಲ್ ದಹಾಲ್ ಪ್ರಚಂಡ, ಆ ದೇಶವು 'ಪರಮಾಧಿಕಾರಿ'ಯಂತೆ ವರ್ತಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಕಳೆದ ಮೂರು ದಿನಗಳಿಂದ ನೇಪಾಳದಾದ್ಯಂತ ನಡೆಯುತ್ತಿದ್ದ ರ‌್ಯಾಲಿಯ ಅಂತ್ಯದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಪ್ರಚಂಡ, 'ಸಮರ್ಥ ರಾಜಕೀಯ ಬಲ ಹೊಂದಿರುವ ಒಂದು ದೇಶವಾಗಿರುವ ಭಾರತವು 1950ರ ಇಂಡೋ-ನೇಪಾಳ್ ಶಾಂತಿ ಮತ್ತು ಸ್ನೇಹ ಒಪ್ಪಂದವನ್ನು ಮುರಿಯುತ್ತಿರುವುದು ಮಾತ್ರವಲ್ಲ; ಸುಗೌಲಿ ಒಡಂಬಡಿಕೆ ಸೇರಿದಂತೆ ಇತರೆಲ್ಲಾ ಒಪ್ಪಂದಗಳನ್ನು ಕೆಡಿಸುತ್ತಿದೆ' ಎಂದು ಆರೋಪಿಸಿದರು.

ಸುಗೌಲಿ ಒಪ್ಪಂದಕ್ಕೆ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳಗಳು 1816ರಲ್ಲಿ ಸಹಿ ಹಾಕಿದ ನಂತರ ಅಕ್ಷರಶಃ ಆಗಿನ ಬ್ರಿಟೀಷ್ ಮತ್ತು ಈಗಿನ ಭಾರತದ ಒಂದು ಚಿಕ್ಕ ಕೇರಿಯಂತಾಗಿದೆ ನೇಪಾಳ. ಈ ವಸಾಹತು ದರ್ಜೆ ಅನೂರ್ಜಿತಗೊಳ್ಳಬೇಕೆಂಬುದು ನಮ್ಮ ಬೇಡಿಕೆ ಎಂದು ಅವರು ಆಗ್ರಹಿಸಿದ್ದಾರೆ.

ಬಳಿಕ ಮಾಧವಕುಮಾರ್ ನೇಪಾಳ್ ನೇತೃತ್ವದ 22 ಪಕ್ಷಗಳ ನೇಪಾಳ ಮೈತ್ರಿ ಸರಕಾರಕ್ಕೂ ಎಚ್ಚರಿಕೆ ನೀಡಿರುವ ಪ್ರಚಂಡ, ಜನವರಿ 24ರೊಳಗೆ ತಮ್ಮ ಪಕ್ಷವನ್ನೂ ಸೇರಿಸಿ ಸರಕಾರ ರಚಿಸಬೇಕು. ಇಲ್ಲವಾದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜನವರಿಯಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ದೇಶದಾದ್ಯಂತ ನಡೆಸುವುದಾಗಿ ಬೆದರಿಕೆ ಹಾಕಿದರು.

ಇದರೊಂದಿಗೆ ಕಳೆದ ಕೆಲವು ದಿನಗಳಿಂದ ನೇಪಾಳದಲ್ಲಿ ಮನೆ ಮಾಡಿದ್ದ ನೀರವತೆ ಕೊನೆಗೊಂಡಿದೆ. ಮೂರು ದಿನಗಳಿಂದ ಮಾವೋವಾದಿಗಳು ಕರೆ ನೀಡಿದ್ದ ಬಂದ್‌ನಿಂದಾಗಿ ರಾಜಧಾನಿ ಕಾಠ್ಮಂಡು ಸೇರಿದಂತೆ ರಾಷ್ಟ್ರದ ಬಹುತೇಕ ನಗರಗಳು ನಿಷ್ಕ್ರಿಯಗೊಂಡಿದ್ದವು. ಸಾರಿಗೆ ವ್ಯವಸ್ಥೆ ಕೂಡ ಸ್ಥಗಿತಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ