ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರಾಚಿ ಮೊಹರಂ ದಾಳಿ ಬಲಿ 40ಕ್ಕೇರಿಕೆ; ಭಾರೀ ಹಿಂಸಾಚಾರ (Pakistan | Karachi | Muharram procession | Shia Muslims)
Bookmark and Share Feedback Print
 
ಶಿಯಾ ಮುಸ್ಲಿಮರು ಕರಾಚಿಯಲ್ಲಿ ನಡೆಸುತ್ತಿದ್ದ ಮೊಹರಂ ಮೆರವಣಿಗೆ ಮೇಲೆ ಸೋಮವಾರ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಗೆ ಇದುವರೆಗೆ ಬಲಿಯಾದವರ ಸಂಖ್ಯೆ 40ಕ್ಕೇರಿದೆ. ಈ ನಡುವೆ ದಾಳಿಯಿಂದ ರೊಚ್ಚಿಗೆದ್ದ ಜನತೆ ಹಿಂಸಾಚಾರ ನಿರತರಾಗಿದ್ದು, ಇಲ್ಲಿನ ಮಾರುಕಟ್ಟೆಯೊಂದಕ್ಕೆ ಹತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ ಈ ಘಟನೆಯಿಂದ 40 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾಚಿ ಹೃದಯ ಭಾಗದಲ್ಲಿನ ಎಂ.ಎ. ಜಿನ್ನಾ ಮಾರ್ಗದಲ್ಲಿ ಸಾಗುತ್ತಿದ್ದ ಮೊಹರಂ ಮೆರವಣಿಗೆಯಲ್ಲಿ ಈ ಸ್ಫೋಟ ನಡೆದಿತ್ತು. ನೂರಾರು ಶಿಯಾ ಮುಸ್ಲಿಮರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ.

ಬಾಂಬ್ ಸ್ಫೋಟದಿಂದಾಗಿ 30 ಮಂದಿ ಸ್ಥಳದಲ್ಲೇ ಕೊಲ್ಲಲ್ಪಟ್ಟರೆ, ಉಳಿದವರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದರು.

ಕಳೆದ ಕೆಲವು ದಿನಗಳಿಂದ ಕರಾಚಿಯಲ್ಲಿ ಶಿಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಮೂರನೇ ಭಯೋತ್ಪಾದನಾ ದಾಳಿಯಿದು. ಹಾಗಾಗಿ ರೊಚ್ಚಿಗೆದ್ದ ಜನತೆ ನಗರದಾದ್ಯಂತ ಹಿಂಸಾಚಾರದಲ್ಲಿ ತೊಡಗಿದೆ.

ಉದ್ರೇಕಿತ ಗುಂಪು ಕಾರುಗಳು, ಅಂಗಡಿ-ಮಳಿಗೆಗಳಿಗೆ ಬೆಂಕಿ ಹಚ್ಚುವುದು, ಪೊಲೀಸರು ಮತ್ತು ಇತರ ಭದ್ರತಾ ಪಡೆಗಳಿಗೆ ಥಳಿಸುವುದು ಮುಂದಾದ ದುಷ್ಕೃತ್ಯಗಳನ್ನು ನಡೆಸುತ್ತಿದೆ. ಜಿನ್ನಾ ಮಾರ್ಗದಲ್ಲಿನ ಮಾರುಕಟ್ಟೆಯ ನೂರಾರು ಅಂಗಡಿಗಳು ಈಗಾಗಲೇ ಅಗ್ನಿಗಾಹುತಿಯಾಗಿವೆ.

ಮಂಗಳವಾರ ಮಧ್ಯಾಹ್ನದವರೆಗೂ ಬೆಂಕಿ ನಂದಿಸಲು ಅಗ್ನಿಶಾಮಕದಳದವರಿಗೆ ಸಾಧ್ಯವಾಗಿಲ್ಲ. 40ಕ್ಕೂ ಹೆಚ್ಚು ಅಗ್ನಿಶಾಮಕದಳಗಳು ಇಲ್ಲಿ ಬೀಡು ಬಿಟ್ಟಿದ್ದರೂ, ನೂರಾರು ಅಂಗಡಿಗಳು, ಬಹುಮಹಡಿ ಕಟ್ಟಡಗಳು ಹೊತ್ತಿ ಉರಿಯುತ್ತಿರುವ ಕಾರಣ ಬೆಂಕಿ ನಂದಿಸುವುದು ಕಷ್ಟವಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ