ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲಿನ ಜನಾಂಗೀಯ ದಾಳಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಭಾರೀ ಹಿನ್ನಡೆ ಅನುಭವಿಸಿದ್ದು, ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿ ಸಂಖ್ಯೆಯಲ್ಲಿ ಶೇ.46ರಷ್ಟು ಕುಸಿತ ದಾಖಲಾಗಿದೆ.
ಕಳೆದ ವರ್ಷದ ಅವಧಿಯ ವೀಸಾ ಅಂಕಿ-ಅಂಶಗಳನ್ನು ಆಸ್ಟ್ರೇಲಿಯಾ ವಲಸೆ ಇಲಾಖೆ ಪ್ರಕಟಿಸಿದ್ದು, ಜಗತ್ತಿನಾದ್ಯಂತದಿಂದ ದೇಶಕ್ಕೆ ಬರಲು ಸಲ್ಲಿಸಿರುವ ಅರ್ಜಿ ಸಂಖ್ಯೆಯಲ್ಲಿ ಶೇ.20ರಷ್ಟು ಹಿನ್ನಡೆಯಾಗಿರುವುದನ್ನು ಬಹಿರಂಗಪಡಿಸಿದೆ.
PR
ವೀಸಾ ಅರ್ಜಿ ಸಂಖ್ಯೆಯಲ್ಲಿ ಕುಸಿತ ಕಾಣಲು ವಿದೇಶಿ ವಿದ್ಯಾರ್ಥಿಗಳ ಮೇಲಿನ ಜನಾಂಗೀಯ ಮತ್ತು ಹಿಂಸಾತ್ಮಕ ದಾಳಿಯೇ ಪ್ರಮುಖ ಕಾರಣವಲ್ಲ ಎಂದು ಇದೇ ಸಂದರ್ಭದಲ್ಲಿ ಇಲಾಖೆಯ ವಕ್ತಾರ ಸಾಂಡಿ ಲಾಗನ್ ಹೇಳಿದ್ದಾರೆ.
ವೀಸಾಕ್ಕಾಗಿ ಸಲ್ಲಿಸುವ ಅರ್ಜಿಗಳ ಕುರಿತು ಕಠಿಣ ಮತ್ತು ಕಟ್ಟುನಿಟ್ಟಾದ ಪರಿಶೀಲನೆಗಳನ್ನು ಕೈಗೊಂಡಿರುವ ಕಾರಣ ಆಸ್ಟ್ರೇಲಿಯಾ ವಲಸೆ ವಿಭಾಗವು ಅತೀ ಹೆಚ್ಚು ಭಾರತದ ಅರ್ಜಿಗಳನ್ನು ತಿರಸ್ಕರಿಸಿದೆ ಎಂದರು.
ಪರೋಕ್ಷವಾಗಿ ಒಪ್ಪಿಕೊಂಡರೂ ಅದೇ ಕಾರಣವಲ್ಲ ಎಂಬ ತನ್ನ ಮೊಂಡು ಹಠವನ್ನು ಆಸ್ಟ್ರೇಲಿಯಾ ಬಿಟ್ಟಿಲ್ಲದಿರುವುದು ಅದರ ಹೇಳಿಕೆಯಲ್ಲೇ ವ್ಯಕ್ತವಾಗುತ್ತಿದೆ.
ಮತ್ತೂ ಸರಿಯಾಗಿ ಹೇಳುವುದಾದರೆ ಭಾರತದಿಂದ ಬರುವ ವೀಸಾ ಅರ್ಜಿಗಳ ಸಂಖ್ಯೆಯಲ್ಲಿ ಹಿನ್ನಡೆಯಾಗಿರುವುದು ಹೌದು ಎಂದು ಅಧಿಕಾರಿ ತಿಳಿಸಿದ್ದಾರೆ.
ನಾವು ಕಠಿಣ ನಿಯಮಗಳನ್ನು ಜಾರಿಗೆ ತಂದ ಕಾರಣ ಹೆಚ್ಚಿನ ವೀಸಾ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಇದರಿಂದಾಗಿ ಭಾರತ, ಮಾರಿಷಸ್, ನೇಪಾಳ, ಬ್ರೆಜಿಲ್, ಜಿಂಬಾಬ್ವೆ ಮತ್ತು ಪಾಕಿಸ್ತಾನಗಳು ವೀಸಾ ಪಡೆದ ಸಂಖ್ಯೆಯಲ್ಲಿ ಕುಸಿತ ಕಂಡಿವೆ ಎಂದು ಲಾಗನ್ ವಿವರಣೆ ನೀಡಿದ್ದಾರೆ.