ಪಾಕಿಸ್ತಾನದ ಪ್ರಮುಖ ನಗರವಾಗಿರುವ ಕರಾಚಿಯಲ್ಲಿ ಮನೆಯೊಂದರ ಸಮೀಪ ಏಕಾಏಕಿ ಬಾಂಬ್‌ವೊಂದು ಸ್ಫೋಟಗೊಂಡ ಪರಿಣಾಮ ಐದು ಮಂದಿ ಗಾಯಗೊಂಡಿದ್ದಾರೆ. ಆದರೆ ಬಾಂಬ್ ಸ್ಫೋಟ ಉಗ್ರರು ನಡೆಸಿದ್ದರೇ ಅಥವಾ ಆಕಸ್ಮಿಕವಾಗಿ ಸ್ಫೋಟಿಸಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ವಾಣಿಜ್ಯ ನಗರಿಯಾದ ಕರಾಚಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐದರಿಂದ ಆರು ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸ್ಫೋಟ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸರ್ದಾರ್ ಅಬ್ದುಲ್ ಮಜೀದ್ ದಾಸ್ತಿ ಸುದ್ದಿಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕರಾಚಿಯಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿದ್ದು, ನೂರಾರು ಅಮಾಯಕರು ಬಲಿಯಾಗಿದ್ದಾರೆ. ಕಳೆದ ವಾರವಷ್ಟೇ ಶಿಯಾ ಮುಸ್ಲಿಮರ ಮೊಹರ್ರಂ ಮೆರವಣಿಗೆ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಪರಿಣಾಮ 43ಮಂದಿ ಬಲಿಯಾಗಿದ್ದರು.