ಭಾರತೀಯ ಯುವಕ ನಿತಿನ್ ಗಾರ್ಗ್ ಹತ್ಯೆಯ ಆರೋಪಿಯನ್ನು ಹಿಡಿಯಲು ಪೊಲೀಸರು ಜಾಲ ಬೀಸಿರುವ ತನ್ಮಧ್ಯೆಯೇ, ಮತ್ತೆ ಭಾರತೀಯ ಯುವಕನೊಬ್ಬನಿಗೆ ಬೆಂಕಿ ಹಚ್ಚಿರುವ ಘಟನೆ ಶನಿವಾರ ಮೆಲ್ಬೊರ್ನ್‌ನಲ್ಲಿ ನಡೆಯುವ ಮೂಲಕ ಜನಾಂಗೀಯ ಹಿಂಸಾಚಾರ ಮುಂದುವರಿದಂತಾಗಿದೆ.
29ರ ಹರೆಯದ ಭಾರತೀಯ ಯುವಕನ ಮೇಲೆ ದಾಳಿಕೋರರು ಬಲವಂತಾಗಿ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ. ಘಟನೆಯಲ್ಲಿ ಯುವಕನ ದೇಹ ಶೇ.15ರಷ್ಟು ಸುಟ್ಟುಹೋಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಭಾರತೀಯ ಮೂಲದ ಆಸ್ಟ್ರೇಲಿಯಾದ ಖಾಯಂ ನಿವಾಸಿಯಾಗಿರುವ ನಿತಿನ್ ಗಾರ್ಗ್ ಎಂಬ ವಿದ್ಯಾರ್ಥಿಯನ್ನು ಅನಾಮಿಕ ವ್ಯಕ್ತಿಗಳು ಚೂರಿಯಿಂದ ಇರಿದು ಕೊಲೆಗೈದಿದ್ದರು. ಅಲ್ಲದೇ ಈ ಘಟನೆ ನಡೆದ ಎರಡು ದಿನದ ನಂತರ ಅರೆಬೆಂದ ಭಾರತೀಯ ಯುವಕನ ಶವವೊಂದು ದೊರಕಿತ್ತು.
ಆಸ್ಟ್ರೇಲಿಯಾದಲ್ಲಿ ಸತತವಾಗಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಯುತ್ತಿರುವ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಆಸ್ಟ್ರೇಲಿಯಾ ಉಪಪ್ರಧಾನಿ ಗಿಲ್ಲರ್ಡ್ ವಿಶ್ವದ ಬೃಹತ್ ನಗರಗಳಲ್ಲಿ ಇಂತಹ ಘಟನೆ ನಡೆಯುವುದು ಸಾಮಾನ್. ಅದನ್ನು ಜನಾಂಗೀಯ ದಾಳಿ, ಕೊಲೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನೂ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದರು. ಆಸ್ಟ್ರೇಲಿಯಾ ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ಮತ್ತೆ ಭಾರತೀಯ ಯುವಕನ ಮೇಲೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.