'ಭಾರತದ ಮಾಧ್ಯಮಗಳು ಸ್ವಲ್ಪ ಕಾಯಲಿ, ನಂತರ ನೈಜಾಂಶವನ್ನು ತಿಳಿಸುತ್ತೇವೆ' ಎಂದು ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಆಸೀಸ್ ಈ ರೀತಿಯಾಗಿ ಮನವಿ ಮಾಡಿಕೊಂಡಿದೆ.
ದೇಶದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದೆಯೇ ಎಂಬ ಬಗ್ಗೆ ಕೂಡಲೇ ತನಿಖೆ ನಡೆಸಿ ನೈಜಾಂಶವನ್ನು ಬಹಿರಂಗಪಡಿಸುವುದಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಸೈಮನ್ ಕ್ರೆಯಾನ್ ಹೇಳಿರುವುದಾಗಿ ಎಎಪಿ ವರದಿ ತಿಳಿಸಿದೆ.
ಇದೊಂದು ತುಂಬಾ ಸೂಕ್ಷ್ಮ ವಿಷಯವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಅವರು, ಭಾರತೀಯರ ಮೇಲೆ ನಡೆದಿರುವ ದಾಳಿ ಜನಾಂಗೀಯ ಹಿನ್ನೆಲೆ ಎಂಬ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದರು.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿಕೊಂಡು ನಿರಂತರವಾಗಿ ದಾಳಿ ನಡೆಯುತ್ತಿದೆ. ಅಲ್ಲದೇ ಕೆಲವು ದಿನಗಳ ಹಿಂದೆ ಇಬ್ಬರು ಭಾರತೀಯರನ್ನು ಹತ್ಯೆಗೈಯಲಾಗಿತ್ತು. ಇದರಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಕ್ಕೆ ಧಕ್ಕೆ ಬರುವಂತಾಗಿತ್ತು.
ಆ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡುತ್ತಿವೆ. ಹಾಗಾಗಿ ಸ್ವಲ್ಪ ಕಾಯಿರಿ ನೈಜಾಂಶ ಅರಿತು ನಂತರ ವರದಿ ಮಾಡಿ ಎಂಬುದಾಗಿ ಸೈಮನ್ ಭಾರತದ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.