ಶ್ರೀಲಂಕಾ ಸರ್ಕಾರ ಧೋರಣೆ ಖಂಡಿಸಿ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸಿ ವರದಿ ಮಾಡಿದ ಪರಿಣಾಮ 20ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಲಂಕಾ ಪತ್ರಕರ್ತನಿಗೆ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ಆತನ ಪರ ವಕೀಲರು ಸೋಮವಾರ ತಿಳಿಸಿದ್ದಾರೆ.
ತಮಿಳು ಬಂಡುಕೋರರ ವಿರುದ್ಧ ಲಂಕಾ ಮಿಲಿಟರಿ ಅನಾವಶ್ಯಕವಾಗಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರೋಪಿಸಿ ಸರ್ಕಾರದ ವಿರುದ್ಧವೇ ವರದಿ ಮಾಡಿದ್ದ ಪತ್ರಕರ್ತ ಜೆಯಾಪ್ರಕಾಶ್ ತಿಸ್ಸೈನಾಯಗಂ ಅವರನ್ನು 2008ರಲ್ಲಿ ಬಂಧಿಸಲಾಗಿತ್ತು. ಅಲ್ಲದೇ ಆತನಿಗೆ 20ವರ್ಷಗಳ ಜೈಲುಶಿಕ್ಷೆಯನ್ನೂ ವಿಧಿಸಲಾಗಿತ್ತು.
ಸೋಮವಾರ ತಿಸ್ಸೈನಾಯಗಂ ಅವರಿಗೆ ಜಾಮೀನು ನೀಡುವಂತೆ ಕೋರಿ ಆವರ ಅಟಾರ್ನಿ ಜನರಲ್ ಸುಮಾನ್‌ತಿರನ್ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಿದ ಕೋರ್ಟ್, ಪತ್ರಕರ್ತ ತಿಸ್ಸೈನಾಯಗಂ ತಮ್ಮ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿ, 500ಅಮೆರಿಕನ್ ಡಾಲರ್ ದಂಡ ಕಟ್ಟುವಂತೆ ಆದೇಶಿಸಿದೆ. ಆ ನಿಟ್ಟಿನಲ್ಲಿ ತಿಸ್ಸೈನಾಯಗಂ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅಟಾರ್ನಿ ವಿವರಿಸಿದ್ದಾರೆ.
ಆದರೆ ಶ್ರೀಲಂಕಾ ಸರ್ಕಾರ ಪತ್ರಕರ್ತರ ವಿರುದ್ಧ ಭಯಾನಕವಾಗಿ ನಡೆದುಕೊಳ್ಳುತ್ತಿದೆ ಎಂದು ಶ್ರೀಲಂಕಾದ ಮಾಧ್ಯಮ ಹಕ್ಕುಗಳ ಸಂಘಟನೆ ಗಂಭೀರವಾಗಿ ಆರೋಪಿಸಿವೆ.