ಅಲಾಸ್ಕಾ ಮಾಜಿ ಗವರ್ನರ್, ಅಮೆರಿಕ ಉಪಾಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿದ್ದ ಸಾರಾ ಪಾಲಿನ್ ಇದೀಗ ಫೋಕ್ಸ್ ನ್ಯೂಸ್ ಚಾನೆಲ್ಗೆ ರಾಜಕೀಯ ವಿಭಾಗದ ವಾಚಕಿಯಾಗಿ ಸೇರ್ಪಡೆಗೊಂಡಿರುವುದಾಗಿ ಜನಪ್ರಿಯ ನ್ಯೂಸ್ ಚಾನೆಲ್ ತಿಳಿಸಿದೆ.
ಫೋಕ್ಸ್ ನ್ಯೂಸ್ ಚಾನೆಲ್ ಸೇರ್ಪಡೆ ನನಗೆ ತುಂಬಾ ಖುಷಿ ತಂದಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಪಾಲಿನ್, ಸಮತೋಲನದ ಸುದ್ದಿ ಮತ್ತು ನ್ಯಾಯಯುತವಾದ ಮೌಲ್ಯಗಳನ್ನು ತಿಳಿಸುವ ಉತ್ತಮವಾದ ಅವಕಾಶ ಇದಾಗಿದೆ ಎಂದಿದ್ದಾರೆ.
ಆ ನಿಟ್ಟಿನಲ್ಲಿ ಚಾನೆಲ್ನಲ್ಲಿ ವಾಚಕಿಯಾಗಿ ಕಾರ್ಯನಿರ್ವಹಿಸಲು ಸಾರಾ ಎರಡು ವರ್ಷಗಳ ಕಾಲದ ಗುತ್ತಿಗೆಗೆ ಸಹಿ ಹಾಕಿದ್ದಾರೆ. ಎಲ್ಲಾ ವಿಭಾಗದ ಜನರನ್ನು ಸೆಳೆಯುವಂತಹ ಆಕರ್ಷಕವಾದ ಧ್ವನಿ ಹೊಂದಿರುವ ಸಾರಾ ಅವರು ಫೋಕ್ಸ್ ನ್ಯೂಸ್ ಗ್ರೂಪ್ ಸೇರ್ಪಡೆಗೊಂಡಿರುವುದು ತುಂಬಾ ಸಂತಸ ತಂದಿರುವುದಾಗಿ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಿಲ್ ಶೈನೆ ತಿಳಿಸಿದ್ದಾರೆ.
ಸಾರಾ ಅವರು ಫೋಕ್ಸ್ ಬ್ಯುಸಿನೆಸ್ ಚಾನೆಲ್, ಫೋಕ್ಸ್ ನ್ಯೂಸ್ ಡಾಟ್ ಕಾಮ್ ಹಾಗೂ ಫೋಕ್ಸ್ ನ್ಯೂಸ್ ರೇಡಿಯೋಗಳಲ್ಲಿಯೂ ಕಾರ್ಯನಿರ್ವಹಿಸಲಿದ್ದಾರೆ.