26/11-ಭಾರತ್ ಪಾಕ್ ಅನ್ನು ಬ್ಲ್ಯಾಕ್‌ಮೇಲ್ ಮಾಡ್ತಿದೆ: ಲಖ್ವಿ
ಲಾಹೋರ್, ಬುಧವಾರ, 13 ಜನವರಿ 2010( 18:22 IST )
ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ 26/11ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯಲ್ಲಿ ತೀರ್ಪು ತಮ್ಮೆಡೆಗೆ ಆಗುವ ನಿಟ್ಟಿನಲ್ಲಿ ಭಾರತ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ಲಷ್ಕರ್ ಇ ತೊಯ್ಬಾದ ವರಿಷ್ಠ ಜಾಕಿರ್ ರೆಹಮಾನ್ ಲಖ್ವಿ ಗಂಭೀರವಾಗಿ ಆರೋಪಿಸಿದ್ದಾನೆ.
ಮುಂಬೈ ದಾಳಿ ಸಂಬಂಧ ಲಖ್ವಿ ಸೇರಿದಂತೆ ಏಳು ಮಂದಿ ಶಂಕಿತ ಆರೋಪಿಗಳು ಪಾಕಿಸ್ತಾನದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಲಖ್ವಿ ವಕೀಲ ಖ್ವಾಜಾ ಸುಲ್ತಾನ್ ನ್ಯೂಸ್ ಚಾನೆಲ್ ಜೊತೆ ಮಾತನಾಡುತ್ತ, ಪ್ರಕರಣದ ಕುರಿತಂತೆ ಭಾರತ ರಾಯಭಾರಿ ಮೂಲಕ ಒತ್ತಡ ಹೇರಿ ವಿಚಾರಣೆಯಲ್ಲಿ ತೀರ್ಪು ತಮ್ಮ ಪರ ಬರುವಂತೆ ನೋಡಿಕೊಳ್ಳುತ್ತಿರುವುದಾಗಿ ದೂರಿದರು.
26/11 ಘಟನೆ ಕುರಿತಂತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದಲ್ಲಿ ಮಾತ್ರ ಪಾಕ್ ಜೊತೆ ಶಾಂತಿ ಪ್ರಕ್ರಿಯೆ ಮಾತುಕತೆಗೆ ಮುಂದಾಗುವುದಾಗಿ ಹೇಳುವ ಮೂಲಕ ಭಾರತ ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುತ್ತಿರುವುದಾಗಿ ಲಖ್ವಿ ತನ್ನ ವಕೀಲರ ಮೂಲಕ ಆರೋಪಿಸಿದ್ದಾನೆ.
ಲಖ್ವಿ ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಆತನ ವಿಚಾರಣೆಯನ್ನು ರಾವಲ್ಪಿಂಡಿಯಿಂದ ಲಾಹೋರ್‌ಗೆ ವರ್ಗಾಯಿಸಬೇಕೆಂದು ಕೋರಿ ವಕೀಲ ಸುಲ್ತಾನ್ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.