ಮತೀಯವಾಗಿ ಧಾರ್ಮಿಕ ಸೌಹಾರ್ಧಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಚರ್ಚ್, ಗುರುದ್ವಾರದ ಮೇಲೆ ದಾಳಿ ನಡೆಸುವ ಮೂಲಕ ದೇಶದಲ್ಲಿ ಧಾರ್ಮಿಕ, ಕೋಮು ಘರ್ಷಣೆಗೆ ಮುಂದಾದದಲ್ಲಿ ಅಂತಹವರ ವಿರುದ್ಧ ಆಂತರಿಕ ಭದ್ರತಾ ಕಾಯ್ದೆ ಉಪಯೋಗಿಸಲಾಗುವುದು ಎಂದು ಮಲೇಷ್ಯಾ ಬುಧವಾರ ಎಚ್ಚರಿಕೆ ನೀಡಿದೆ.
ಕೋಮುಘರ್ಷಣೆ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಆಂತರಿಕ ಭದ್ರತಾ ಕಾಯ್ದೆಯನ್ನು ಉಪಯೋಗಿಸುವಲ್ಲಿ ಹಿಂದೆ-ಮುಂದೆ ನೋಡುವುದಿಲ್ಲ ಎಂದು ಮಲೇಷ್ಯಾ ಗೃಹ ಸಚಿವ ಹಿಶ್‌ಮುದ್ದೀನ್ ಹುಸೈನ್ ತಿಳಿಸಿದ್ದಾರೆ.
ಕಾನೂನು ಭಂಗ ಮಾಡುವವರ ವಿರುದ್ಧ ಐಎಸ್‌ಎ(ಇಂಟರ್ನಲ್ ಸೆಕ್ಯುರಿಟಿ ಆಕ್ಟ್) ಸೇರಿದಂತೆ ಕಠಿಣ ಕಾನೂನು ಉಪಯೋಗಿಸುವಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಹುಸೈನ್ ತಿಳಿಸಿರುವುದಾಗಿ ನ್ಯಾಷನಲ್ ನ್ಯೂಸ್ ಏಜೆನ್ಸಿ ಬೆರ್ನಾಮಾ ವರದಿ ಹೇಳಿದೆ.
ದೇವರ ಹೆಸರಿನಲ್ಲಿ ಅಲ್ಲಾ ಶಬ್ದವನ್ನು ಕ್ಯಾಥೋಲಿಕ್ ಧರ್ಮದವರು ಉಪಯೋಗಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದ ನಂತರ ಮಲೇಷ್ಯಾದಲ್ಲಿ ಸುಮಾರು ಹತ್ತು ಚರ್ಚ್, ಗುರುದ್ವಾರದ ಮೇಲೆ ದಾಳಿ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮೂಲಭೂತವಾದಿಗಳಿಗೆ ಹುಸೈನ್ ಎಚ್ಚರಿಕೆ ನೀಡಿದ್ದಾರೆ.