ಆಸ್ಟ್ರೇಲಿಯಾದಲ್ಲಿ ಭಾರತದ ತೀವ್ರ ಆಕ್ಷೇಪದ ನಡುವೆಯೂ ಭಾರತೀಯರ ಮೇಲಿನ ಜನಾಂಗೀಯ ದಾಳಿ ಮುಂದುವರಿದಿದೆ. ಇಲ್ಲಿನ ವಿಕ್ಟೋರಿಯಾ ನಗರದ ಬಲ್ಲಾರಟ್ ಪ್ರದೇಶದಲ್ಲಿ ಭಾರತೀಯ ಟ್ಯಾಕ್ಸಿ ಚಾಲಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ಬೈದು ದಾಳಿ ನಡೆಸಿದ ಘಟನೆ ನಡೆದಿದೆ.
24ರ ಹರೆಯದ ಟ್ಯಾಕ್ಸಿ ಚಾಲಕನೊಬ್ಬನ ಮೇಲೆ ದಾಳಿ ನಡೆಸಿದ ಆಸೀಸ್ ಪ್ರಯಾಣಿಕ, ಟ್ಯಾಕ್ಸಿಯನ್ನು ಕೂಡ ಜಖಂಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ 48ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಬಲ್ಲಾರಟ್ ಸರ್ವಿಸ್ ಸ್ಟೇಶನ್ ಬಳಿ ಗುರುವಾರ ರಾತ್ರಿ ಟ್ಯಾಕ್ಸಿ ಡ್ರೈವರ್ ಬಳಿ ಬಂದ ಪ್ರಯಾಣಿಕ ಬಾಯಿಗೆ ಬಂದಂತೆ ಬೈದು ಹಲ್ಲೆ ನಡೆಸಿರುವುದಾಗಿ ಪೊಲೀಸ್ ವಕ್ತಾರರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
ಮಂಗಳವಾರ (ಜ.5) 28ರ ಹರೆಯದ ಭಾರತೀಯ ಯುವಕನೊಬ್ಬನಿಗೆ ಆಸ್ಟ್ರೇಲಿಯಾದ ಗುಂಪೊಂದು ದಾಳಿ ನಡೆಸಿರುವ ಘಟನೆ ಸಿಡ್ನಿ ಬೀಚ್‌ನಲ್ಲಿ ನಡೆದಿತ್ತು.
ಭಾರತದ ಈ ಯುವಕ ಆಸ್ಟ್ರೇಲಿಯಾದ ಕಾಯಂ ನಿವಾಸಿಯಾಗಿದ್ದು, ದಾಳಿಗೊಳಗಾದ ಯುವಕನ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆಸ್ಟ್ರೇಲಿಯಾದ ಯುವಕರ ಗುಂಪೊಂದು ಏಕಾಏಕಿ ಭಾರತೀಯನ ಮೇಲೆ ದಾಳಿ ನಡೆಸಿದ್ದರು.
ಬಿಜೆಪಿ ಕಿಡಿ: ಆಸ್ಟ್ರೇಲಿಯಾದಲ್ಲಿ ಸತತವಾಗಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದ್ದರು ಕೂಡ ಭಾರತ ಈ ಕುರಿತು ಪ್ರತಿರೋಧದ ಧ್ವನಿ ಎತ್ತಲು ಹಿಂದೇಟು ಹಾಕುತ್ತಿರುವುದಾಗಿ ಬಿಜೆಪಿ ತೀವ್ರವಾಗಿ ಆಕ್ಷೇಪಿಸಿದೆ. ಭಾರತೀಯರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಗಟ್ಟುವಲ್ಲಿ ಭಾರತ ಕೂಡಲೇ ಆಸ್ಟ್ರೇಲಿಯಾ ಸರ್ಕಾರದ ಜೊತೆ ಗಂಭೀರ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದೆ.
ಠಾಕ್ರೆ ಗುಡುಗು: ಆಸೀಸ್ ನೆಲದಲ್ಲಿ ಭಾರತೀಯರ ಮೇಲಿನ ಹಲ್ಲೆ ನಿಲ್ಲುವವರೆಗೂ ಮಹಾರಾಷ್ಟ್ರದಲ್ಲಿ ಆಸೀಸ್ ಕ್ರಿಕೆಟ್ ತಂಡಕ್ಕೆ ಆಡಲು ಬಿಡುವುದಿಲ್ಲ ಎಂದು ಶಿವಸೇನಾ ವರಿಷ್ಠ ಬಾಳ ಠಾಕ್ರೆ ಸಾಮ್ನಾದಲ್ಲಿ ಸಂಪಾದಕೀಯ ಬರೆಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆ ಮುಂದುವರಿದಿದೆ.