ಚೀನಾದ ವಿವಾದಿತ 'ತ್ರೀ ಗಾರ್ಜಸ್ ಡ್ಯಾಮ್' ಎಂಬ ಅಣೆಕಟ್ಟಿಗಾಗಿ 14 ಲಕ್ಷ ಮಂದಿ ನಿರ್ವಸಿತರಾಗಲಿದ್ದಾರೆ ಎಂದು ಈ ಹಿಂದೆ ಸರಕಾರ ಹೇಳಿತ್ತಾದರೂ, ಇದೀಗ ಹೆಚ್ಚುವರಿ ಮೂರು ಲಕ್ಷ ಮಂದಿ ಸ್ಥಳಾಂತರಗೊಳ್ಳಬೇಕಿದೆ ಎಂದು ವರದಿಯೊಂದು ಹೇಳಿದೆ.
ಜಲಾಶಯದ ಮಗ್ಗುಲಿನಲ್ಲಿ ವಾಸಿಸುತ್ತಿರುವ ಸಮುದಾಯಗಳು ವಾತಾವರಣವನ್ನು ಕಲುಷಿತಗೊಳಿಸಬಾರದು ಮತ್ತು ಸಂಭಾವ್ಯ ಭೂಕಂಪದಂತಹ ಅಪಾಯಗಳಿಂದ ನಿವಾಸಿಗಳನ್ನು ತಡೆಯುವ ಸಲುವಾಗಿ ಹೆಚ್ಚುವರಿ ಸ್ಥಳಾಂತರಕ್ಕೆ ಚೀನಾ ಮುಂದಾಗಿದೆ ಎಂದು 'ಚೈನಾ ಡೈಲಿ' ಎಂಬ ಆಂಗ್ಲ ಪತ್ರಿಕೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.
ಹೂಬೈ ಪ್ರಾಂತ್ಯದ ಯಿಲಿಂಗ್ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆಯು 2011ರಲ್ಲಿ ಉದ್ಘಾಟನೆಗೊಳ್ಳಲಿದೆ. ಯಾಂಗ್ಜೆ ನದಿಗೆ ಕಟ್ಟಲಾಗುತ್ತಿರುವ ಈ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಹೆಚ್ಚಿನ ಪ್ರದೇಶಗಳೆಲ್ಲ ಚಾಂಗ್‌ಕ್ವಿಂಗ್ ಮಹಾನಗರ ಪಾಲಿಕೆ ವ್ಯಾಪ್ತಿಯದ್ದಾಗಿದ್ದು, ಈ ಪ್ರದೇಶದಿಂದ ಹೆಚ್ಚಿನ ಜನತೆ ಬೇರೆಡೆಗೆ ವಲಸೆ ಹೋಗಲಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ದೇಶೀಯ ಮಾಧ್ಯಮಗಳ ಪ್ರಕಾರ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳವರೆಗೆ 12.7 ಲಕ್ಷ ಜನತೆ ಯೋಜನೆಗಾಗಿ ಈ ಪ್ರದೇಶದಿಂತ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.
ಜಲವಿದ್ಯುತ್ ಯೋಜನೆಯಿಂದಾಗಿ ಮುಳುಗಡೆಯಾಗಲಿರುವ ಪ್ರದೇಶಗಳ ಸುಮಾರು 14 ಲಕ್ಷ ಜನತೆ ಸ್ಥಳಾಂತರಗೊಳ್ಳಬೇಕಾದೀತು ಎಂದು ಈ ಹಿಂದೆ ಚೀನಾ ಸರಕಾರವು ಹೇಳಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಮೂರು ಲಕ್ಷ ಮಂದಿ ಸ್ಥಳಾಂತರಗೊಳ್ಳಬೇಕು ಎಂದು ಹೇಳುತ್ತಿದೆ.
185 ಮೀಟರ್ ಎತ್ತರ ಹಾಗೂ 2,300 ಮೀಟರ್ ಅಗಲಕ್ಕೆ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಅಣೆಕಟ್ಟಾಗಲಿರುವ ಇದಕ್ಕಾಗಿ 22.5 ಬಿಲಿಯನ್ ಡಾಲರ್ ವೆಚ್ಚವಾಗಲಿದೆ.