ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಗೆ ಕೇವಲ ಐದು ದಿನಗಳು ಇರುವ ನಡುವೆಯೇ, ಲಂಕಾ ನೆಲದಲ್ಲಿ ಮತ್ತೆ ಎಲ್‌ಟಿಟಿಇ ಮರುಹುಟ್ಟು ಪಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅಧ್ಯಕ್ಷ ಮಹಿಂದ ರಾಜಪಕ್ಸೆ ಶಪಥ ಮಾಡಿದ್ದಾರೆ.
ಕಳೆದ ಮೂರು ದಶಕಗಳ ಕಾಲ ಪ್ರತ್ಯೇಕವಾದದ ಮೂಲಕ ಅಟ್ಟಹಾಸ ಮೆರೆದ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ ಅನ್ನು ಕಳೆದ ವರ್ಷ ಲಂಕಾ ಮಿಲಿಟರಿ ಪಡೆ ಸಂಪೂರ್ಣವಾಗಿ ಸೋಲಿಸುವ ಮೂಲಕ ವಿಜಯ ಪತಾಕೆ ಹಾರಿಸಿತ್ತು.
ದಕ್ಷಿಣ ಶ್ರೀಲಂಕಾದಲ್ಲಿ ವಿವಿಧ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಂಕಾದ ಜನ ಮತ್ತೆ ಭಯಾನಕ ರೂಪ ಹೊಂದಿರುವ ಉಗ್ರಗಾಮಿ ಸಂಘಟನೆ ಅಥವಾ ದೇಶ ಇಬ್ಭಾಗ ಮಾಡುವ ಶಕ್ತಿಗಳು ಪುನರ್ ಸಂಘಟನೆಗೊಳ್ಳುವುದುನ್ನು ಬಯಸಲಾರರು ಎಂಬ ವಿಶ್ವಾಸ ತನಗಿದೆ ಎಂದರು.
ಇನ್ನು ಮುಂದೆ ಶ್ರೀಲಂಕಾದ ಮಣ್ಣಿನಲ್ಲಿ ಯಾವುದೇ ಉಗ್ರಗಾಮಿ ಸಂಘಟನೆ ಜನ್ಮ ತಳೆಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಎಲ್‌ಟಿಟಿಇಯ ಅವನತಿಯ ನಂತರ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜನವರಿ 26ರಂದು ಲಂಕಾ ಅಧ್ಯಕ್ಷಗಾದಿಗಾಗಿ ಚುನಾವಣೆ ನಡೆಯಲಿದೆ. ಇದರಲ್ಲಿ ಹಾಲಿ ಅಧ್ಯಕ್ಷ ರಾಜಪಕ್ಸೆ ಹಾಗೂ ಪ್ರತಿಸ್ಪರ್ಧಿಯಾಗಿ ಮಾಜಿ ಜನರಲ್ ಸರತ್ ಫೋನ್ಸೆಕಾ ಕಣದಲ್ಲಿದ್ದಾರೆ. ಆ ನಿಟ್ಟಿನಲ್ಲಿ ಲಂಕಾ ಅಧ್ಯಕ್ಷಗಾದಿ ಚುನಾವಣಾ ಪ್ರಚಾರ ರಂಗೇರತೊಡಗಿದ್ದು, ಅಂತಿಮ ಅಖಾಡ ಸಿದ್ದವಾಗಿದೆ.