ವಾಣಿಜ್ಯ ನಗರಿಯಾಗಿರುವ ಮುಂಬೈ ಮೇಲೆ 26/11ರ ದಾಳಿ ಮತ್ತೆ ನಡೆಯುವುದಿಲ್ಲ ಎಂಬ ಬಗ್ಗೆ ನಾವು ಯಾವುದೇ ಆಶ್ವಾಸನೆ ನೀಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.
ಪಾಕಿಸ್ತಾನ ನೆಲದಲ್ಲಿ ಆಶ್ರಯಪಡೆಯದಿರುವ ಉಗ್ರಗಾಮಿ ಸಂಘಟನೆಗಳು ಮತ್ತೆ ಭಾರತದ ಮೇಲೆ 26/11ರ ದಾಳಿ ನಡೆಯದಂತೆ ಪಾಕಿಸ್ತಾನ ಸರ್ಕಾರ ನಿಗಾ ವಹಿಸಬೇಕು, ಇಲ್ಲದಿದ್ದಲ್ಲಿ ಭಾರತದ ಸಹನೆಯ ಕಟ್ಟೆ ಒಡೆಯಬಹುದು ಎಂದು ಅಮೆರಿಕ ಪಾಕಿಸ್ತಾನಕ್ಕೆ ಗಂಭೀರವಾದ ಎಚ್ಚರಿಕೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಪಾಕ್ ಈ ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ರೋಬೆರ್ಟ್ ಗೇಟ್ಸ್ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಮುಂಬೈ ಮಾದರಿಯ ದಾಳಿ ಪುನರಾವರ್ತನೆ ಆಗುವುದಿಲ್ಲ ಎಂಬ ಆಶ್ವಾಸನೆಯನ್ನು ತಾನು ಖಂಡಿತವಾಗಿಯೂ ನೀಡಲಾರೆ ಎಂದು ಗಿಲಾನಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಪ್ರತಿದಿನ ಎಂಬಂತೆ ಮುಂಬೈ ಮಾದರಿ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಮತ್ತೆ ಸ್ವತಃ ನಾವೇ ನಮ್ಮ ಪ್ರಜೆಗಳನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅವರು, ಆ ನಿಟ್ಟಿನಲ್ಲಿ ಭಾರತ ಮೇಲೆ ಮತ್ತೊಂದು ಮುಂಬೈ ಮಾದರಿ ದಾಳಿ ನಡೆಯುವುದಿಲ್ಲ ಎಂಬುದಾಗಿ ಯಾವ ರೀತಿಯಲ್ಲಿ ಭರವಸೆ ನೀಡಲಿ ಎಂದು ಪ್ರಶ್ನಿಸಿದ್ದಾರೆ.