ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಯೆಮೆನ್‌ನಲ್ಲಿಯೂ ಉಗ್ರಗಾಮಿ ಸಂಘಟನೆಯ ಶಾಖೆಯನ್ನು ಆರಂಭಿಸುವ ಮೂಲಕ ಜಿಹಾದ್ ಹೋರಾಟವನ್ನು ಆರಂಭಿಸಿದ್ದು, ಆ ನಿಟ್ಟಿನಲ್ಲಿ ಯೆಮೆನ್ ಕೂಡ ಮತ್ತೊಂದು ಅಫ್ಘಾನಿಸ್ತಾನ್ ಆಗುವ ಲಕ್ಷಣ ಗೋಚರಿಸತೊಡಗಿದೆ.
ಮಧ್ಯಏಷ್ಯಾದ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಯೆಮೆನ್‌ನಲ್ಲಿ ಲಾಡೆನ್ ತನ್ನ ನೆಲೆಯನ್ನು ಸ್ಥಾಪಿಸಿದ್ದು, ಜಿಹಾದ್ ಹೆಸರಿನಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.
1980ರ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾದ ವಿರುದ್ಧ ಹೋರಾಡುವ ಸಲುವಾಗಿ ಯೆಮೆನ್ ಸುಮಾರು ಹತ್ತು ಸಾವಿರ ಹೋರಾಟಗಾರರನ್ನು ಕಳುಹಿಸಿತ್ತು. ಅದೇ ರೀತಿ ಇರಾಕ್‌ನಲ್ಲಿಯೂ ಬಹಳಷ್ಟು ಯೆಮೆನಿಗಳು ಸಾವನ್ನಪ್ಪಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ವಿವರಿಸಿದೆ.
ರಾಷ್ಟ್ರೀಯ ಬಿಕ್ಕಟ್ಟು ಹುಟ್ಟಿಕೊಂಡ ಸಂದರ್ಭದಲ್ಲಿ ಯೆಮೆನ್ ಸತತವಾಗಿ ಹೋರಾಟಗಾರರನ್ನು ಕಳುಹಿಸುವ ಪರಿಪಾಠವನ್ನು ಇಟ್ಟುಕೊಂಡಿದೆ. ಅದಾಗಲೇ ಯೆಮೆನ್ ಸರ್ಕಾರ ಮತ್ತು ಅಲ್ ಖಾಯಿದಾ ನಡುವಿನ ಸಂಬಂಧ ಗಳಸ್ಯ ಕಂಠಸ್ಯವಾಗಿತ್ತು.