ಪಾಕ್‌ನಲ್ಲಿ ಬ್ಲ್ಯಾಕ್‌ವಾಟರ್ ಕಾರ್ಯಾಚರಿಸುತ್ತಿದೆ: ಅಮೆರಿಕ
ಇಸ್ಲಾಮಾಬಾದ್, ಶನಿವಾರ, 23 ಜನವರಿ 2010( 19:49 IST )
ಪಾಕಿಸ್ತಾನದಲ್ಲಿ ಅಮೆರಿಕದ ವಿವಾದಿತ ಖಾಸಗಿ ಭದ್ರತಾ ಸಂಸ್ಥೆ ಬ್ಲ್ಯಾಕ್ ವಾಟರ್ ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಪಾಕ್‌ನ ವಿರೋಧ ಪಕ್ಷಗಳು ಆಡಳಿತಾರೂಢ ಪಿಪಿಪಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ ನಂತರ, ಪಾಕಿಸ್ತಾನ ನೆಲದಲ್ಲಿ ಬ್ಲ್ಯಾಕ್ ವಾಟರ್ ಕಾರ್ಯಾಚರಿಸುತ್ತಿರುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ರೋಬೆರ್ಟ್ ಗೇಟ್ಸ್ ಒಪ್ಪಿಕೊಂಡಿದ್ದಾರೆ.
ಆದಾಗ್ಯೂ ಪಾಕಿಸ್ತಾನ ಸರ್ಕಾರ ಮಾತ್ರ ಅಮೆರಿಕದ ಯಾವುದೇ ಖಾಸಗಿ ಭದ್ರತಾ ಸಂಸ್ಥೆ ದೇಶದೊಳಗೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿಲ್ಲ ಎಂಬುದಾಗಿಯೇ ವಾದಿಸುತ್ತಿದೆ. ಗೇಟ್ಸ್ ಅವರು ತಪ್ಪು ಮಾಹಿತಿ ನೀಡಿರುವುದಾಗಿ ತಿಳಿಸಿರುವ ಪಾಕ್ ಸರ್ಕಾರ, ಒಂದು ವೇಳೆ ಬ್ಲ್ಯಾಕ್ ವಾಟರ್ ಪಾಕಿಸ್ತಾನದೊಳಗೆ ಕಾರ್ಯಾಚರಣೆ ನಡೆಸುತ್ತಿದೆ ಎಂದಾದರೆ ಅದು ಅದರ ಖಾಸಗಿಯಾದ ಸಾಹಸವಾಗಿದೆ ಎಂದು ಸಮಜಾಯಿಷಿ ನೀಡಿದೆ.
ಆ ನಿಟ್ಟಿನಲ್ಲಿ ಪಾಕಿಸ್ತಾನ್ ಆಂತರಿಕ ಸಚಿವ ರೆಹಮಾನ್ ಮಲಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಸೆನೆಟರ್ ಜಾಫರ್ ಅಲಿ ಶಾ ಆಗ್ರಹಿಸಿದ್ದಾರೆ.
ಅಮೆರಿಕದ ವಿವಾದಿತ ಖಾಸಗಿ ಭದ್ರತಾ ಸಂಸ್ಥೆ ಬ್ಲ್ಯಾಕ್ ವಾಟರ್ ಸಂಸ್ಥೆ ಪಾಕಿಸ್ತಾನದೊಳಗೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದು, ನಾಗರಿಕರ ಕಣ್ಮರೆಗೆ ಇದೇ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಐಎಸ್‌ಐ ನಿವೃತ್ತ ಅಧಿಕಾರಿಯೊಬ್ಬರು ಗಂಭೀರವಾಗಿ ಆಪಾದಿಸಿದ್ದರು.
ಈ ಸಂಸ್ಥೆಯ ಪಾಕ್‌ನ ಸೇನಾ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳ ನಿವೃತ್ತ ನೌಕರರಿಗೆ ಭಾರೀ ಸಂಬಳದ ಆಮೀಷವೊಡ್ಡಿ ತನ್ನ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ ಎಂದು ಐಎಸ್‌ಐನ ನಿವೃತ್ತ ಅಧಿಕಾರಿ ಖಾಲಿದಾ ಖ್ವಾಜಾ ದೂರಿದ್ದರು. ದೇಶದಲ್ಲಿ ಕಣ್ಮರೆಯಾಗುತ್ತಿರುವ ಪಾಕಿಸ್ತಾನಿ ನಾಗರಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಾಗಿಯೂ ಖ್ವಾಜಾ ಆರೋಪ ಎತ್ತಿದ್ದರು.
ಕಣ್ಮರೆಯಾಗಿರುವ ನಾಗರಿಕರನ್ನು ಪಾಕ್ ಭದ್ರತಾ ಸಂಸ್ಥೆಗಳು ವಿಚಾರಣೆ ಇಲ್ಲದೆ ಬಂಧಿಸಿರುವ ಗುಮಾನಿ ಇದೆ. ತಾಲಿಬಾನ್ ಅಥವಾ ಅಲ್ ಖಾಯಿದಾ ಜೊತೆ ಸಂಬಂಧ ಹೊಂದಿದವರನ್ನು ಹೆಕ್ಕಿ ತರುವಂತೆ ಬ್ಲ್ಯಾಕ್ ವಾಟರ್ ತನ್ನ ಸಂಸ್ಥೆಯ ಸಿಬ್ಬಂದಿಗೆ ಸೂಚಿಸುತ್ತಿದೆ. ಆ ನಿಟ್ಟಿನಲ್ಲಿ ದೇಶದಲ್ಲಿ ಕಣ್ಮರೆಯಾಗಿರುವ ಸುಮಾರು ಒಂದು ಸಾವಿರ ನಾಗರಿಕರನ್ನು ಹಾಜರುಪಡಿಸುವಂತೆ ಪಾಕ್ ಸುಪ್ರೀಂಕೋರ್ಟ್ ಪಾಕಿಸ್ತಾನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.