ಇರಾನ್‌ನ ಈಶಾನ್ಯ ನಗರ ಮೆಸ್ಸಾದ್‌ನಲ್ಲಿ ಇಳಿಯುತ್ತಿದ್ದ ವೇಳೆ ಪ್ರಯಾಣಿಕ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡ ಕಾರಣ 46ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಷ್ಯಾದಲ್ಲಿ ತಯಾರಾಗಿದ್ದ 'ತಪೊಲೆವ್ 154' ಎಂಬ 'ತಾಬಾನ್ ಏರ್‌ಲೈನ್'ಗೆ ಸೇರಿದ ಪ್ರಯಾಣಿಕ ವಿಮಾನವು ಮೆಸ್ಸಾದ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ವಿಮಾನದ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಇರಾನ್ ಅಧಿಕಾರಿಗಳು ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ವಿಮಾನವು ಇಳಿಯುತ್ತಿರುವಾಗ ರನ್‌ವೇಯಿಂದ ಹೊರಗೆ ಹೋಗಿದ್ದು, ಹಿಂಬದಿ ಮುರಿದಿದೆ. ಘಟನೆಯಿಂದ 46 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಲ್ಲ ಎಂದು ಖೊರಾಸನ್ ರಜಾವಿ (ಇದರ ರಾಜಧಾನಿ ಮೆಸ್ಸಾದ್) ಪ್ರಾಂತ್ಯದ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಜಾವೇದ್ ಇರ್ಫಾನಿಯನ್ ತಿಳಿಸಿದ್ದಾರೆಂದು ಟೀವಿ ವಾಹಿನಿಗಳು ವರದಿ ಮಾಡಿವೆ.
ಇರಾನ್ ನೈಋತ್ಯದ ಅಬದಾನ್‌ನಿಂದ ಮೆಸ್ಸಾದ್‌ಗೆ ಪ್ರಯಾಣಿಸಿದ ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ 13 ಸಿಬ್ಬಂದಿಗಳಿದ್ದರು ಎಂದು ಇರಾನ್‌ನ ಇಂಗ್ಲೀಷ್ ಚಾನೆಲ್ 'ಪ್ರೆಸ್ ಟೀವಿ' ಹೇಳಿದೆ.
ಅಬಾದನ್‌ನಿಂದ ಶನಿವಾರ ಹೊರಟಿದ್ದ ವಿಮಾನವು ಪ್ರತಿಕೂಲ ವಾತಾವರಣದ ಕಾರಣದಿಂದಾಗಿ ಮೆಸ್ಸಾದ್ ಬದಲು ಕೇಂದ್ರೀಯ ನಗರ ಇಸ್ಫಾಹನ್‌ನಲ್ಲಿ ರಾತ್ರಿ ಇಳಿದಿತ್ತು. ಆದರೆ ಭಾನುವಾರ ಮುಂಜಾನೆ ಮತ್ತೆ ಮೆಸ್ಸಾದ್‌ನಲ್ಲಿಯೇ ಇಳಿದಿತ್ತು.
ವಿಮಾನದಲ್ಲಿ ವ್ಯಕ್ತಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವಿಮಾನವನ್ನು ಮೆಸ್ಸಾದ್‌ನಲ್ಲಿಯೇ ಅನಿವಾರ್ಯವಾಗಿ ಇಳಿಸಬೇಕಾಯಿತು. ಈ ಸಂದರ್ಭದಲ್ಲಿ ಅಫಘಾತವುಂಟಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.