ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗೂಗಲ್ ಸೈಬರ್ ದಾಳಿಯಲ್ಲಿ ಚೀನಾ ಪಾತ್ರ ಇಲ್ವಂತೆ (China | Google cyber attacks | Google | United States)
Bookmark and Share Feedback Print
 
ಇಂಟರ್ನೆಟ್ ಸರ್ಚ್ ಇಂಜಿನ್ ದೈತ್ಯ ಗೂಗಲ್ ಮೇಲಿನ ಸೈಬರ್ ದಾಳಿಗೆ ಸಂಬಂಧಿಸಿದಂತೆ ತನ್ನ ಪಾತ್ರವನ್ನು ನಿರಾಕರಿಸಿರುವ ಚೀನಾ, ಅಮೆರಿಕಾ ಇಬ್ಬಂದಿತನ ಮೆರೆಯುತ್ತಿದೆ ಎಂದು ಆರೋಪಿಸಿದೆ.

ಚೀನಾ ಮೂಲದ ಹ್ಯಾಕರುಗಳು ತನ್ನ ತಾಣಗಳ ಮೇಲೆ ದಾಳಿ ನಡೆಸಿದೆ ಎಂಬ ಗೂಗಲ್ ಹೇಳಿಕೆಯ ಬಗ್ಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬೆಂಬಲ ವ್ಯಕ್ತಪಡಿಸಿ, ಚೀನಾದಿಂದ ಅಧಿಕೃತ ಹೇಳಿಕೆಯನ್ನು ಬಯಸಿದ ನಂತರವೂ ಬೀಜಿಂಗ್ ತನ್ನ ನಿರಾಕರಣೆಯನ್ನು ಮುಂದುವರಿಸಿದೆ.

ಸೈಬರ್ ದಾಳಿಗಳ ಹಿನ್ನೆಲೆಯಲ್ಲಿ ಚೀನಾದಲ್ಲಿನ ತನ್ನ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕಾದ ಸರ್ಚ್ ಇಂಜಿನ್ ದೈತ್ಯ ಇತ್ತೀಚೆಗಷ್ಟೇ ಬೆದರಿಕೆ ಹಾಕಿತ್ತು. ಅಲ್ಲದೆ ಚೀನಾ ಸರಕಾರದ ಸೆನ್ಸಾರ್‌ಗಳಿಗೆ ಸುದೀರ್ಘ ಸಮಯ ತಲೆಬಾಗುವುದು ತನ್ನಿಂದ ಸಾಧ್ಯವಿಲ್ಲ ಎಂದಿತ್ತು.

ಆದರೆ ಎಲ್ಲಾ ಆರೋಪಗಳನ್ನು ನಿರಾಕರಿಸುವ ಚೀನಾ, ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದಿದೆ.

ಯಾವುದೇ ಸೈಬರ್ ದಾಳಿಗಳಲ್ಲಿ ಚೀನಾ ಪಾಲ್ಗೊಂಡಿದೆ ಎಂಬ ನೇರ ಅಥವಾ ಪರೋಕ್ಷ ಆರೋಪಗಳಿದ್ದರೆ ಅವು ಆದಾರರಹಿತ ಮತ್ತು ಚೀನಾದ ಹೆಸರು ಕೆಡಿಸುವ ಉದ್ದೇಶದಿಂದ ಕೂಡಿದೆ ಎಂದು ಕೈಗಾರಿಕಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಸರು ಹೇಳಲಿಚ್ಛಿಸದ ವಕ್ತಾರರು ಸ್ಥಳೀಯ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಂತರ್ಜಾಲ ಸುರಕ್ಷತೆ ಕುರಿತ ಚೀನಾದ ನಿಲುವು ಪಾರದರ್ಶಕವಾಗಿದ್ದು, ನಿರಂತರವಾಗಿರುತ್ತದೆ. ಆನ್‌ಲೈನ್ ಸಮುದಾಯದಲ್ಲಿ ಬೃಹತ್ ಪ್ರಮಾಣದಲ್ಲಿ ಗುರುತಿಸಿಕೊಳ್ಳುತ್ತಿರುವ ತನ್ನ ರಾಷ್ಟ್ರವೇ ಹ್ಯಾಕಿಂಗ್ ಪೀಡೆಗೆ ಪ್ರಮುಖ ಬಲಿಪಶುವಾಗಿದೆ. ಹಾಗಾಗಿ ನಾವು ದಾಳಿ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಚೀನಾ ತಿಳಿಸಿದೆ.

ಅದೇ ಹೊತ್ತಿಗೆ 'ಗ್ಲೋಬಲ್ ಟೈಮ್ಸ್' ಎಂಬ ಚೀನಾದ ಆಂಗ್ಲ ಪತ್ರಿಕೆಯು ಅಮೆರಿಕಾವನ್ನೇ ತರಾಟೆಗೆ ತೆಗೆದುಕೊಂಡಿದ್ದು, ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಸೈಬರ್ ಸಮರವನ್ನು ಆರಂಭಿಸಿದ್ದೇ ಅಮೆರಿಕಾ ಎಂದು ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ