ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ; ಅತ್ಯುತ್ತಮ ಮತದಾನ (Sri Lanka | presidential polls | Mahinda Rajapaksa | Sarath Fonseka)
Bookmark and Share Feedback Print
 
ಎಲ್‌ಟಿಟಿಇ ದಮನದ ನಂತರ ಮೊತ್ತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗೆ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದ್ದು, ತಮಿಳರ ಕೇಂದ್ರ ಸ್ಥಾನ ಜಾಪ್ನಾದಲ್ಲಿನ ಸ್ಫೋಟಗಳ ಹೊರತಾಗಿಯೂ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ಮತ್ತು ಮಾಜಿ ಮಿಲಿಟರಿ ಮುಖ್ಯಸ್ಥ ಸರತ್ ಫೊನ್ಸೇಕಾ ಅವರ ನಡುವಿನ ಆಯ್ಕೆಗಾಗಿ ಬಿರುಸಿನ ಮತದಾನ ನಡೆದಿದೆ.

ದೇಶದಾದ್ಯಂತ ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುವ ಮೊದಲೇ ತಮ್ಮ ಹಕ್ಕನ್ನು ಚಲಾಯಿಸಲು ಜನತೆ ಸಾಲುಗಟ್ಟಿ ನಿಂತಿದ್ದರು ಎಂದು ವರದಿಗಳು ಹೇಳಿವೆ.

ಅದೇ ಹೊತ್ತಿಗೆ ಕೆಲವು ಕಡೆ ಅಹಿತಕರ ಘಟನೆಗಳು ನಡೆದ ಬಗ್ಗೆಯೂ ವರದಿಗಳು ಬಂದಿವೆ. ಜಾಫ್ನಾದ ವೆಲ್ವೆತುರೈ ಪ್ರದೇಶದಲ್ಲಿ ಇಂದು ಮುಂಜಾನೆ ಎರಡು ಪೆಟ್ರೋಲ್ ಬಾಂಬುಗಳನ್ನು ಎಸೆಯಲಾಗಿದೆ. ಆದರೆ ಈ ಸ್ಫೋಟದಿಂದ ಯಾರು ಕೂಡ ಗಾಯಗೊಂಡಿಲ್ಲ ಎಂದು ಮಿಲಿಟರಿ ವಕ್ತಾರ ಉದಯ ನಾನಯಕ್ಕರ ತಿಳಿಸಿದ್ದಾರೆ.

ದೇಶದ ಆರನೇ ಅಧ್ಯಕ್ಷೀಯ ಚುನಾವಣೆಗಾಗಿ ಮಾಜಿ ಜನರಲ್ ಫೊನ್ಸೇಕಾ ವಿರುದ್ಧ ಈಗಿನ ಅಧ್ಯಕ್ಷ ರಾಜಪಕ್ಷೆ ತೀವ್ರ ಹೋರಾಟ ನೀಡುತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ ದೇಶದ ಅಧ್ಯಕ್ಷ ಗಾದಿಯನ್ನು ಹಿಡಿಯುವ ನಿರ್ದಿಷ್ಟ ಫಲಿತಾಂಶವನ್ನು ಹೇಳಲು ಅಸಾಧ್ಯ. ಇಬ್ಬರೂ ಕತ್ತುಕತ್ತಿನ ಹೋರಾಟ ನಡೆಸುತ್ತಿರುವುದರಿಂದ, ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ ಎನ್ನುತ್ತಾರೆ.

ಫೊನ್ಸೇಕಾ ಅವರು ತಮಿಳರ ಪರ ಕಳೆದ ಹಲವು ಸಮಯಗಳಿಂದ ದನಿಯೆತ್ತುತ್ತಾ ಬಂದಿದ್ದು, ಅವರ ಒಲವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಲಂಕಾ ಸರಕಾರವು ತಮಿಳರ ವಿರುದ್ಧ ಮಿಲಿಟರಿಯನ್ನು ಎಷ್ಟು ಕ್ರೂರವಾಗಿ ಬಳಸಿಕೊಂಡಿತ್ತು ಎಂಬುದನ್ನು ಕೂಡ ಫೊನ್ಸೇಕಾ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು.

ಪ್ರಭಾಕರನ್ ಹತ್ಯೆಯ ನಂತರ ಎಲ್‌ಟಿಟಿಇ ನಿರ್ನಾಮವಾಗಿತ್ತು. ಆದರೆ ಈ ಸುದೀರ್ಘ ಸಮರದಿಂದಾಗಿ ಲಕ್ಷಾಂತರ ತಮಿಳರು ನಿರಾಶ್ರಿತರಾಗಿದ್ದರು. ನಿರಾಶ್ರಿತ ಶಿಬಿರಗಳಲ್ಲಿ ನೀಡಲಾಗುವ ಗುರುತು ಚೀಟಿಯನ್ನು ಕೂಡ ಮತದಾನಕ್ಕೆ ಬಳಸಬಹುದು ಎಂದು ಇತ್ತೀಚೆಗಷ್ಟೇ ಲಂಕಾ ಚುನಾವಣಾ ಆಯುಕ್ತರು ಹೇಳಿರುವ ಹಿನ್ನೆಲೆಯಲ್ಲಿ ತಮಿಳರ ಪ್ರಾಬಲ್ಯ ಪ್ರದೇಶಗಳಲ್ಲೂ ಬಿರುಸಿನ ಮತದಾನ ನಡೆದಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ