ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಸೀದಿಗೆ ಹಂದಿ ತಲೆ ಎಸೆದ ದುಷ್ಕರ್ಮಿಗಳು ; ತೀವ್ರ ವಿವಾದ (Pig heads | Malaysian mosque | Allah row | Muslim)
Bookmark and Share Feedback Print
 
ಇತ್ತೀಚೆಗಷ್ಟೇ ಅಲ್ಲಾಹ್ ಶಬ್ಧ ಬಳಕೆಯ ಕುರಿತ ವಿವಾದಕ್ಕೆ ಸಾಕ್ಷಿಯಾದ ಮಲೇಷಿಯಾದಲ್ಲಿ ಧಾರ್ಮಿಕ ಸಂಘರ್ಷಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಲವು ಮಸೀದಿಗಳಲ್ಲಿ ಹಂದಿ ತಲೆಗಳು ಪತ್ತೆಯಾಗುವುದರೊಂದಿಗೆ ವಿವಾದ ತಾರಕಕ್ಕೇರಿದೆ.

ಕೌಲಾಲಂಪುರದಲ್ಲಿನ ಒಂದು ಮಸೀದಿ ಮತ್ತು ನಗರದ ಹೊರ ವಲಯದಲ್ಲಿನ ಎರಡು ಮಸೀದಿಗಳಲ್ಲಿ ಹಂದಿ ತಲೆಗಳನ್ನು ಎಸೆಯಲಾಗಿರುವುದನ್ನು ಅಲ್ಲಿನ ಪೊಲೀಸ್ ಮುಖ್ಯಸ್ಥರೂ ಖಚಿತಪಡಿಸಿದ್ದಾರೆ. ಆದರೆ ಇದು ಕೋಮು ಸಾಮರಸ್ಯ ಕದಡಲೆತ್ನಿಸುವ ಒಂದೇ ಗುಂಪಿನ ಕೃತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ತಮಾನ್ ದಾತೋ ಹರೂನ್ ಮಸೀದಿ ಆವರಣ ಗೋಡೆಯೊಳಗೆ ಎರಡು ಹಂದಿಗಳ ರಕ್ತಸಿಕ್ತ ತಲೆಗಳನ್ನುನ್ನು ಚೀಲದಲ್ಲಿ ಕಟ್ಟಿ ಎಸೆಯಲಾಗಿದೆ. ಉಳಿದ ಕಡೆಗಳಲ್ಲಿಯೂ ಇದೇ ರೀತಿಯ ಘಟನೆಗಳು ಮುಂಜಾನೆ ಪ್ರಾರ್ಥನೆಗೆಂದು ಬಂದಾಗ ಬೆಳಕಿಗೆ ಬಂದಿವೆ.

ಇಸ್ಲಾಂ ಧರ್ಮದ ಪ್ರಕಾರ ಹಂದಿ ಮುಸ್ಲಿಮರಿಗೆ ನಿಷಿದ್ಧ. ಧಾರ್ಮಿಕ ಕೇಂದ್ರದಲ್ಲಿ ಹಂದಿ ತಲೆಗಳು ಪತ್ತೆಯಾಗಿರುವುದನ್ನು ತಮಗೆ ಮಾಡಲಾದ ಅಪಚಾರ ಎಂದೇ ಮುಸ್ಲಿಮರು ಭಾವಿಸುತ್ತಾರೆ.

ಮುಸ್ಲಿಮೇತರರು 'ಅಲ್ಲಾಹ್' ಶಬ್ಧ ಬಳಕೆ ಮಾಡುವುದರ ಮೇಲೆ ಮಲೇಷಿಯಾ ಸರಕಾರ ಹೇರಿದ್ದ ನಿಷೇಧವನ್ನು ಇಲ್ಲಿನ ಸುಪ್ರೀಂ ತೆರವುಗೊಳಿಸಿ, ಯಾರು ಬೇಕಾದರೂ ಅಲ್ಲಾಹ್ ಶಬ್ದವನ್ನು ಬಳಕೆ ಮಾಡಬಹುದು ಎಂದು ಐತಿಹಾಸಿಕ ತೀರ್ಪು ನೀಡಿತ್ತು.

ಇದೇ ಕಾರಣಕ್ಕಾಗಿ ಬಳಿಕ ಮಲೇಷಿಯಾದಲ್ಲಿ ಧಾರ್ಮಿಕ ಸಂಘರ್ಷಗಳು ಹೆಚ್ಚಿದ್ದು, ಇತ್ತೀಚಿನ ಕೆಲ ವಾರಗಳಲ್ಲಿ ಇಲ್ಲಿ ಕನಿಷ್ಠ 11 ಚರ್ಚುಗಳು, ಒಂದು ಸಿಖ್ ಮಂದಿರ ಮತ್ತು ಹಲವು ಮುಸ್ಲಿಂ ಪ್ರಾರ್ಥನಾ ಕೇಂದ್ರಗಳಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.

ಮುಸ್ಲಿಂ ರಾಷ್ಟ್ರವಾಗಿರುವ ಮಲೇಷಿಯಾದಲ್ಲಿ ಚೀನಾ ಮತ್ತು ಭಾರತೀಯ ಸಮುದಾಯಗಳು ಬೃಹತ್ ಪ್ರಮಾಣದಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕಲು ಯತ್ನಿಸಲಾಗುತ್ತಿದೆ. ಇದರಲ್ಲಿ ಕೆಲವು ಗುಂಪುಗಳ ಕೈವಾಡವಿದೆ. ಈ ಹಿಂದಿನ ದಾಳಿಗಳಿಗೂ ಇದಕ್ಕೂ ಸಾಮ್ಯತೆ ಕಂಡು ಬರುತ್ತಿರುವುದರಿಂದ ಒಂದೇ ಗುಂಪು ಈ ಕೃತ್ಯಗಳನ್ನು ನಡೆಸಿರುವುದು ಸ್ಪಷ್ಟ. ಇಂತಹ ದಾಳಿಗಳನ್ನು ನಡೆಸಲು ಕೆಲವರು ಹಣ ವಿನಿಯೋಗಿಸುತ್ತಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಮೂಸಾ ಹಸನ್ ತಿಳಿಸಿದ್ದಾರೆ.

ಬೆಂಕಿಯೊಂದಿಗೆ ಯಾರೂ ಆಟಕ್ಕಿಳಿಯಬೇಡಿ. ದೇಶದ ಸುರಕ್ಷತೆ ವಿಚಾರದಲ್ಲಿ ನಾನು ಯಾವ ವಿಚಾರದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ದಯವಿಟ್ಟು ಸಾರ್ವಜನಿಕರು ಅಥವಾ ಯಾವುದೇ ಪಕ್ಷಗಳು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವಂತಹ ಪ್ರಚೋದನೆಗಳಿಗೆ ಮುಂದಾಗಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ