ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಕಾ ಪಟ್ಟ ಉಳಿಸಿಕೊಂಡ ರಾಜಪಕ್ಷೆ; ಫೊನ್ಸೇಕಾ ಪರಾಜಯ (Sri Lanka | Mahinda Rajapaksa | Sarath Fonseka | Presidential election)
Bookmark and Share Feedback Print
 
ತೀವ್ರ ಕುತೂಹಲ ಕೆರಳಿಸಿದ್ದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹೀಂದ್ರಾ ರಾಜಪಕ್ಷೆಯವರು ಜಯಗಳಿಸಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರು ಅಭೂತಪೂರ್ವ ಜಯ ದಾಖಲಿಸಿದ್ದಾರೆ. ಅವರು 18 ಲಕ್ಷಕ್ಕೂ ಅಧಿಕ ಮತಗಳಿಂದ ಫೊನ್ಸೇಕಾ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ ಎಂದು ಲಂಕಾದ ಟೀವಿ ವಾಹಿನಿ 'ರೂಪವಾಹಿನಿ' ವರದಿ ಮಾಡಿದೆ.

ಒಟ್ಟು ಮತದ ಶೇ.58.8ರಷ್ಟು ಅಂದರೆ ಸುಮಾರು 60 ಲಕ್ಷ ಮತಗಳನ್ನು 64ರ ಹರೆಯದ ರಾಜಪಕ್ಷೆ ಪಡೆದರೆ, ಮೈತ್ರಿಕೂಟದ ಅಭ್ಯರ್ಥಿ ಫೊನ್ಸೇಕಾ ಶೇ.40.8 ಅಂದರೆ 41 ಲಕ್ಷ ಮತಗಳನ್ನು ಪಡೆದಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಸರತ್ ಫೊನ್ಸೇಕಾ ವಿರುದ್ಧ ರಾಜಪಕ್ಷೆ ಭಾರೀ ಅಂತರದಿಂದ ಜಯ ಗಳಿಸಿದ್ದಾರೆ. ಲಂಕಾ ಸಂವಿಧಾನದ ಪ್ರಕಾರ ಶೇ.50ಕ್ಕಿಂತ ಹೆಚ್ಚು ಮತ ಪಡೆದಲ್ಲಿ ಅಧ್ಯಕ್ಷನಾಗಬಹುದು ಎಂದು ಮೂಲಗಳು ಹೇಳಿವೆ.

ದ್ವೀಪರಾಷ್ಟ್ರದ 1.4 ಕೋಟಿ ನೋಂದಾಯಿತ ಮತದಾರರಲ್ಲಿ ಶೇ.70ರಿಂದ 80ರಷ್ಟು ಮತದಾರರು ಮಂಗಳವಾರ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು.

'ಯುನೈಟೆಡ್ ಪ್ಯೂಪಲ್ಸ್ ಫ್ರೀಡಂ ಅಲಯೆನ್ಸ್‌' ಪಕ್ಷದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರಾಜಪಕ್ಷೆಯವರ ವಿರುದ್ಧ ತಮಿಳರು ಮುನಿಸಿಕೊಂಡಿದ್ದು, ಇದರ ಲಾಭ ಪಡೆದುಕೊಂಡಿದ್ದ 'ನ್ಯೂ ಡೆಮಾಕ್ರಾಟಿಕ್ ಫ್ರಂಟ್'ನ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮಿಲಿಟಲಿ ಮಾಜಿ ಮುಖ್ಯಸ್ಥ ಜಯಗಳಿಸುವ ವಿಶ್ವಾಸದಿಂದಿದ್ದರು.

ಅಲ್ಲದೆ ಹಲವು ಎಲ್‌ಟಿಟಿಇ ಪರ ಪಕ್ಷಗಳು ಕೂಡ ಫೊನ್ಸೇಕಾ ಅವರಿಗೆ ಬೆಂಬಲ ಸೂಚಿಸಿದ್ದವು. ತಮಿಳು ಹುಲಿಗಳ ವಿರುದ್ಧದ ಸಮರದ ಸಂದರ್ಭದಲ್ಲಿ ಸೇನೆಯ ಮೂಲಕ ದೌರ್ಜನ್ಯ ನಡೆಸಲಾಗಿದ್ದ ಹಲವು ಪ್ರಸಂಗಗಳನ್ನು ಕೂಡ ಫೊನ್ಸೇಕಾ ಬಹಿರಂಗಪಡಿಸುವ ಮೂಲಕ ತಮಿಳರ ಒಲವು ಗಳಿಸಿಕೊಂಡಿದ್ದರು.

ಫೊನ್ಸೇಕಾಗೆ ಗೃಹಬಂಧನ?
ಈ ನಡುವೆ ಫೊನ್ಸೇಕಾ ಮಾಲಕತ್ವದ ಕಟ್ಟಡವೊಂದನ್ನು ಲಂಕಾ ಮಿಲಿಟರಿ ಸುತ್ತುವರಿದಿದ್ದು, ತನ್ನನ್ನು ಕೊಂದೇ ಹಾಕುತ್ತಾರೆ ಎಂದು ಫೊನ್ಸೇಕಾ ಭೀತಿ ವ್ಯಕ್ತಪಡಿಸಿದ್ದಾರೆ.

ಫೊನ್ಸೇಕಾ ಉಳಿದುಕೊಂಡಿರುವ ಈ ಬಹುಮಹಡಿ ಕಟ್ಟಡವನ್ನು ಸುಮಾರು 400ಕ್ಕೂ ಹೆಚ್ಚು ಯೋಧರು ಸುತ್ತುವರಿದಿರುವುದನ್ನು ಸೇನೆ ಒಪ್ಪಿಕೊಂಡಿದೆಯಾದರೂ, ಅವರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಕಟ್ಟಡದಲ್ಲಿ ಸೇನಾ ಬಂಡುಕೋರರು ಅವಿತಿರುವ ಕಾರಣ ಕಟ್ಟಡವನ್ನು ನಾವು ಸುತ್ತುವರಿದಿದ್ದೇವೆ. ಅವರು ಯಾವುದೇ ಹೊತ್ತಿನಲ್ಲಿ ಹೊರಗೆ ಹೋಗಬಹುದು ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ