ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೊನ್ಸೇಕಾ ಕಚೇರಿ ಮೇಲೆ ಶ್ರೀಲಂಕಾ ಎಸ್‌ಟಿಎಫ್ ದಾಳಿ (Lankan STF | Sri Lanka | Gen Sarath Fonseka | Mahinda Rajapaksa)
Bookmark and Share Feedback Print
 
ಪರಾಜಿತ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮಿಲಿಟರಿ ಮಾಜಿ ಮುಖ್ಯಸ್ಥ ಜನರಲ್ ಸರತ್ ಫೊನ್ಸೇಕಾ ಅವರ ಕಚೇರಿಗೆ ಶುಕ್ರವಾರ ಶ್ರೀಲಂಕಾದ ವಿಶೇಷ ಕಾರ್ಯಾಚರಣೆ ಪಡೆಯ 100ಕ್ಕೂ ಹೆಚ್ಚು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಅವರು ಯಾತಕ್ಕಾಗಿ ದಾಳಿ ನಡೆಸಿದ್ದಾರೆ, ಏನನ್ನು ಬಯಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇಲ್ಲಿನ ಸಿಬ್ಬಂದಿಗಳನ್ನು ಕೂಡ ವಿಚಾರಣೆಗೊಳಪಡಿಸಿದ್ದಾರೆ ಎಂದು ಜನವರಿ 26ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡ ಫೊನ್ಸೇಕಾ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಎಸ್‌ಟಿಎಫ್‌ನ 100ಕ್ಕೂ ಹೆಚ್ಚು ಯೋಧರು ಫೊನ್ಸೇಕಾ ಕಚೇರಿಗೆ ದಾಳಿ ನಡೆಸಿರುವುದನ್ನು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕೂಡ ಖಚಿತಪಡಿಸಿದ್ದಾರೆ. ಅವರ ಕಚೇರಿಯನ್ನು ಮುಖವಾಡ ತೊಟ್ಟಿದ್ದ ಎಸ್‌ಟಿಎಫ್ ಅಧಿಕಾರಿಗಳು ಸುತ್ತುವರಿದಿದ್ದರು ಮತ್ತು ಇದನ್ನು ವರದಿ ಮಾಡಲು ಮಾಧ್ಯಮಗಳಿಗೆ ಅವಕಾಶ ನೀಡಿಲ್ಲ. ಈ ಪ್ರದೇಶದ ನಿರ್ಬಂಧ ಹೇರಲಾಗಿದೆ ಎಂದು 'ಡೈಲೀ ಮಿರರ್ ಆನ್‌ಲೈನ್' ವರದಿ ಮಾಡಿದೆ.

ಈ ಬಗ್ಗೆ ಪೊಲೀಸ್ ವಕ್ತಾರ ಎಸ್.ಎಂ. ಕರುಣಾರತ್ನೆಯವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಯಾವುದೇ ಮಾಹಿತಿ ತನ್ನಲ್ಲಿಲ್ಲ ಎಂದು ಹೇಳಿದ್ದಾರೆ.

ಅಧ್ಯಕ್ಷ ರಾಜಪಕ್ಷೆ ಮತ್ತು ಅವರ ಕುಟುಂಬಸ್ಥರನ್ನು ಫೊನ್ಸೇಕಾ ಹತ್ಯೆಗೈಯಲು ಯತ್ನಿಸಿದ್ದರು ಎಂದು ಶ್ರೀಲಂಕಾ ಸರಕಾರ ಆರೋಪಿಸಿದ ಮರುದಿನವೇ ಇಂತಹ ದಾಳಿ ನಡೆದಿರುವುದು ಕುತೂಹಲ ಹುಟ್ಟಿಸಿದೆ.

ಮಿಲಿಟರಿ ಮಾಜಿ ಮುಖ್ಯಸ್ಥರು ಕೊಲೊಂಬೊದಲ್ಲಿನ ಎರಡು ಹೊಟೇಲುಗಳಲ್ಲಿ ಸಂಚು ರೂಪಿಸಿರುವುದನ್ನು ಖಚಿತಪಡಿಸುವ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೊಂಡಿರುವ ರಕ್ಷಣಾ ಸಚಿವಾಲಯ, ಈ ಸಂಬಂಧ ಗುರುವಾರ ಹೊಟೇಲ್ ಆವರಣದಿಂದ ಒಂಬತ್ತು ಉಚ್ಛಾಟಿತ ಸೈನಿಕರನ್ನು ವಶಕ್ಕೆ ತೆಗೆದುಕೊಂಡಿದೆ.

ಆದರೆ ಇವೆಲ್ಲಾ ಆರೋಪಗಳನ್ನೂ ತಳ್ಳಿ ಹಾಕಿರುವ ಫೊನ್ಸೇಕಾ, ನನ್ನನ್ನು ಬಂಧಿಸಲು ನಡೆಸಲಾಗುತ್ತಿರುವ ಪಿತೂರಿಯಿದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ