ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11: ಉಗ್ರರ ವಿರುದ್ಧ ಪಾಕ್‌ನಿಂದ ಕೋರ್ಟ್‌ಗೆ ಪುರಾವೆ ಸಲ್ಲಿಕೆ (Pakistan | 26/11Mumbai attacks | Lakhvi | India)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಉಗ್ರರಾದ ಲಷ್ಕರ್ ಇ ತೊಯ್ಬಾದ ವರಿಷ್ಠ ಜಾಕೀರ್ ರೆಹಮಾನ್ ಲಖ್ವಿ ಹಾಗೂ ಇತರ ಆರು ಮಂದಿಯ ವಿರುದ್ಧ ಪಾಕಿಸ್ತಾನ ಸರ್ಕಾರ ಶನಿವಾರ ಭಯೋತ್ಪಾದನಾ ನಿಗ್ರಹ ಕೋರ್ಟ್‌ಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದೆ.

ಸರ್ಕಾರದ ಅಧಿಕಾರಿಗಳು ಮತ್ತು ವಕೀಲರು ಉಗ್ರರ ವಿರುದ್ಧದ ಪುರಾವೆಯನ್ನು ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಮೂರ್ತಿ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ಅವರಿಗೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.

ಆದರೆ ಮುಂಬೈ ದಾಳಿಯಲ್ಲಿ ಪಾಲ್ಗೊಂಡಿರುವ ಶಂಕಿತ ಉಗ್ರರ ವಿರುದ್ಧ ಯಾವ ವಿಧವಾದ ಸಾಕ್ಷಿಯನ್ನು ಸಲ್ಲಿಸಿದ್ದಾರೆಂಬ ನಿಖರ ಮಾಹಿತಿ ದೊರೆತಿಲ್ಲ. ಘಟನೆ ಕುರಿತಂತೆ ಉಗ್ರರ ವಿರುದ್ಧ ಪಾಕ್ ಸರ್ಕಾರ ಸಲ್ಲಿಸಿದ ಪುರಾವೆಯನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ಮಲಿಕ್ ಅವರು ಮುಂದಿನ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿರುವುದಾಗಿ ಆರೋಪಿತರ ಪರ ವಕೀಲರಾದ ಶಾಬಾಜ್ ರಾಜ್‌ಪುಟ್ ತಿಳಿಸಿದ್ದಾರೆ.

ರಾವಲ್ಪಿಂಡಿಯಲ್ಲಿರುವ ಅಡಿಯಾಲಾ ಜೈಲಿನಲ್ಲಿ ಸೂಕ್ತ ರಕ್ಷಣೆ ಮತ್ತು ತಮ್ಮ ಕಕ್ಷಿದಾರರ ಜೊತೆ ಮಾತನಾಡಲು ಸೂಕ್ತ ಅವಕಾಶ ಮಾಡಿಕೊಡಬೇಕೆಂಬ ಲಾಹೋರ್ ಹೈಕೋರ್ಟ್ ಆದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದನ್ನು ವಿರೋಧಿಸಿ ಜನವರಿ 23ರಂದು ನಡೆದ ಆರೋಪಿತರ ವಿಚಾರಣೆ ವಿರುದ್ಧ ಡೆಫೆನ್ಸ್ ವಕೀಲರು ಪ್ರತಿಭಟನೆ ನಡೆಸಿದ್ದರು.ಭದ್ರತೆಯ ಹಿತದೃಷ್ಟಿಯಿಂದ ಅಡಿಯಾಲಾ ಜೈಲಿನಲ್ಲಿಯೇ ನ್ಯಾಯಮೂರ್ತಿ ಅವಾನ್ ಅವರು ಮುಂಬೈ ದಾಳಿಯ ಶಂಕಿತ ಉಗ್ರರ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಲಕ್ವಿ, ಜರಾರ್ ಷಾ, ಅಬು ಅಲ್ ಖ್ವಾಮಾ, ಹಮಾದ್ ಅಮಿನ್ ಸಾದಿಕ್, ಶಾಹೀದ್ ಜಾಮಿಲ್ ರಿಯಾಜ್, ಜಾಮಿಲ್ ಅಹ್ಮದ್ ಮತ್ತು ಯೂನಾಸ್ ಅಂಜುಂ ಅಡಿಯಾಲಾ ಜೈಲಿನಲ್ಲಿದ್ದಾರೆ.

2008ರ ನವೆಂಬರ್ ತಿಂಗಳಿನಲ್ಲಿ ಭಾರತದ ವಾಣಿಜ್ಯ ಕೇಂದ್ರವಾದ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಸಂಚು ಮತ್ತು ನೆರವು ನೀಡಿದ ಆರೋಪವನ್ನು ಲಕ್ವಿ ಹಾಗೂ ಇತರ ಆರು ಶಂಕಿತ ಉಗ್ರರ ವಿರುದ್ಧ ದಾಖಲಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ