ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್! (Divorce | Riyadh | Child Marriage | Islam)
Bookmark and Share Feedback Print
 
ಬಾಲ್ಯ ವಿವಾಹದ ವಿರುದ್ಧ ಯಾವುದೇ ಕಾನೂನುಗಳಿಲ್ಲದಿರುವ ಮತ್ತು ಮುಸ್ಲಿಂ ಮತ ಪಂಡಿತರು 'ಇದು ಇಸ್ಲಾಮಿಕ್ ಮತ್ತು ಸೌದಿ ಸಂಪ್ರದಾಯ' ಎಂದೇ ಸಮರ್ಥಿಸಿಕೊಳ್ಳುತ್ತಿರುವಂತೆಯೇ, 12ರ ಬಾಲಕಿಯೊಬ್ಬಳು 80ರ ಮುದುಕನಿಗೆ ತಲಾಖ್ ನೀಡಿದ್ದಾಳೆ. 'ವಧು'ದಕ್ಷಿಣೆಗೆ ಪ್ರತಿಯಾಗಿ ಈ ಹುಡುಗಿಯ ತಂದೆಯು ವೃದ್ಧನೊಂದಿಗೆ ಮದುವೆ ಮಾಡಿಸಿಕೊಟ್ಟಿದ್ದನಂತೆ!

ಆದರೆ, ಮಾನವ ಹಕ್ಕು ಸಂಘಟನೆಗಳು ಹಾಗೂ ಮಕ್ಕಳ ಕಲ್ಯಾಣ ವಿಭಾಗದ ವಕೀಲರ ಬೆಂಬಲದ ಹೊರತಾಗಿಯೂ, ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಈ ಬಾಲಕಿ ಮತ್ತು ಆಕೆಯ ತಾಯಿ, ನ್ಯಾಯಾಲಯವೊಂದರಲ್ಲಿ ಈ ಕೇಸನ್ನೇ ಹಿಂತೆಗೆದುಕೊಳ್ಳಬೇಕಾಗಿಬಂದಿದೆ.

ಕೊನೆಗೆ, ಈ ವೃದ್ಧನೊಂದಿಗಿನ ತನ್ನ ಮದುವೆಗೆ ತನ್ನ ಸಮ್ಮತಿ ಇದೆ ಎಂದೇ ಅಲ್-ಖಾಸಿಂ ಪ್ರಾಂತ್ಯದ ಬುರೈಡಾ ಎಂಬಲ್ಲಿನ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಒಕಾಜ್ ಎಂಬ ಪತ್ರಿಕೆ ವರದಿ ಮಾಡಿದೆ. 'ತಂದೆಯ ನಿರ್ಧಾರವನ್ನು ಗೌರವಿಸುತ್ತೇನೆ, ಮದುವೆಗೆ ಪೂರ್ಣ ಸಮ್ಮತಿ ಇದೆ' ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.

ಈ ದಿಢೀರ್ ನಿರ್ಧಾರ ಬದಲಾವಣೆ ಬಗ್ಗೆ ಬಾಲಕಿಯ ತಾಯಿ ತನಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಚಾರಿಟಿ ಸಂಸ್ಥೆಯೊಂದು ಗೊತ್ತುಪಡಿಸಿದ್ದ ವಕೀಲ ಸಲೇ ಅಲ್-ದಬೀಬಿ ತಿಳಿಸಿದ್ದಾರೆ. ವಿವಾಹ ರದ್ದು ಪಡಿಸಬೇಕೆಂದು ಕೋರಿ ಈ ಹಿಂದೆ ತಾಯಿಯು ಸರಕಾರಿ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಳು. ಆದರೆ, ತಾಯಿಯ ಈ ನಿರ್ಧಾರದಿಂದ ತಮಗೂ ಅಚ್ಚರಿಯಾಗಿದೆ ಎಂದಿದೆ ಆಯೋಗ.

ವರದಿಗಳ ಪ್ರಕಾರ, ತಾಯಿಯಿಂದ ಪ್ರತ್ಯೇಕಿತವಾಗಿದ್ದ ಈ ಬಾಲಕಿಯ ತಂದೆಯು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 85 ಸಾವಿರ ರಿಯಲ್ (ಸುಮಾರು ಹತ್ತುವರೆ ಲಕ್ಷ) ವಧು ದಕ್ಷಿಣೆ ಪಡೆದುಕೊಂಡು, 80ರ ವೃದ್ಧನ ಜೊತೆ ಅವಳ ವಿವಾಹ ನೆರವೇರಿಸಿದ್ದ. ಬಳಿಕ ಈ ಬಾಲಕಿಯು ಪತ್ರಕರ್ತರಲ್ಲಿ 'ನನ್ನನ್ನು ಕಾಪಾಡಿ' ಎಂದು ಹೇಳಿಕೆ ನೀಡಿದ್ದೂ ಕೂಡ ಜನವರಿ ತಿಂಗಳಲ್ಲಿ ಅಲ್-ರಿಯಾಧ್ ಪತ್ರಿಕೆಯಲ್ಲಿ ಪ್ರಕಟವಾಗಿ ಭಾರೀ ಕೋಲಾಹಲ ಎಬ್ಬಿಸಿತ್ತು. ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ತಾಯಿಯೂ ಕೂಡ ಕೋರ್ಟಿಗೆ ಮೊರೆ ಹೋಗಿದ್ದಳು. ಈ ಪ್ರಕರಣ ಸೋಮವಾರ ವಿಚಾರಣೆಗೆ ಬಂದಾಗ, ತಾಯಿ ದಿಢೀರ್ ಆಗಿ ಕೇಸನ್ನೇ ಹಿಂತೆಗೆದುಕೊಂಡಳು.

ಬಾಲ ವಿವಾಹದ ವಿರುದ್ಧ ಸೌದಿ ಅರೇಬಿಯಾದಲ್ಲಿ ಯಾವುದೇ ಕಾನೂನುಗಳಿಲ್ಲ. ಇದು ಇಸ್ಲಾಮಿಕ್ ಮತ್ತು ಸೌದಿ ಸಂಪ್ರದಾಯದ ಪ್ರಕಾರವೇ ನಡೆಯುತ್ತದೆ ಎಂದು ಮತ ಪಂಡಿದರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ವಿವಾಹದ ಕನಿಷ್ಠ ವಯಸ್ಸು 16 ಎಂದು ನಿಗದಿಪಡಿಸುವ ಕಾನೂನಿಗಾಗಿ ಮಾನವ ಹಕ್ಕುಗಳ ಸಂಘಗಳು ಹೋರಾಡುತ್ತಿವೆ.

ಆದರೆ, 9ರ ಹರೆಯದ ಬಾಲಕಿಯೊಂದಿಗೆ 14 ಶತಮಾನಗಳ ಹಿಂದೆ ನಡೆದಿದ್ದ ಪ್ರವಾದಿ ಮಹಮ್ಮದರ ವಿವಾಹವನ್ನು ಮುಂದಿಟ್ಟುಕೊಂಡು ಇಂದಿನ ಬಾಲ್ಯ ವಿವಾಹಗಳನ್ನು ಸಮರ್ಥಿಸಿಕೊಳ್ಳಲಾಗದು ಎಂದು ಜನವರಿ ತಿಂಗಳಲ್ಲಿ ಹಿರಿಯ ಧಾರ್ಮಿಕ ಪಂಡಿತರಾದ ಶೇಖ್ ಅಬ್ದುಲ್ಲಾ ಅಲ್-ಮಾನೀ ಅವರು ಒಕಾಜ್ ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು.

ಪ್ರವಾದಿ ಮಹಮ್ಮದರು ಬಾಲಕಿ ಆಯಿಷಾಳನ್ನು ವಿವಾಹವಾಗಿರುವ ಪರಿಸ್ಥಿತಿಗಿಂತ ಇಂದಿನ ಪರಿಸ್ಥಿತಿ ತೀರಾ ಭಿನ್ನ ಎಂದೂ ಹಿರಿಯ ಉಲೇಮಾ ಮಂಡಳಿಯ ಸದಸ್ಯರೂ ಆಗಿರುವ ಶೇಖ್ ಅಬ್ದುಲ್ಲಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ