ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 20ನೇ ಮಗು ಹೌದೆಂದು ಒಪ್ಪಿಕೊಂಡ ದ.ಆಫ್ರಿಕಾ ಅಧ್ಯಕ್ಷ (South African President | 20th child | Jacob Zuma | Sonono Khoza)
Bookmark and Share Feedback Print
 
ವಿವಾಹೇತರ ಸಂಬಂಧದಿಂದ ಹುಟ್ಟಿರುವ ಮಗು ತನ್ನದೇ ಮತ್ತು ಆ ಮಗುವಿನ ತಾಯಿಯ ಜತೆ ತಾನು ದೈಹಿಕ ಸಂಪರ್ಕ ಹೊಂದಿದ್ದೆ ಎಂದು ಐದು ಮದುವೆಯಾಗಿರುವ ಮತ್ತು 20ನೇ ಮಗುವನ್ನು ಪಡೆದಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜೂಮಾ ಸ್ಪಷ್ಟಪಡಿಸಿದ್ದಾರೆ.

ಸೋನೊನೊ ಖೊಜಾ ಎಂಬ ಮಹಿಳೆಗೆ ಹುಟ್ಟಿದ ಮಗು ಅಧ್ಯಕ್ಷ ಜೂಮಾ ಅವರಿಗೆ ಸೇರಿದ್ದು ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದವು. ಈ ಸಂಬಂಧ ಇದೀಗ ಖಚಿತಪಡಿಸಿರುವ ಅಧ್ಯಕ್ಷ, ಆ ಮಗು ತನ್ನದೇ ಎಂದು ಒಪ್ಪಿಕೊಂಡಿದ್ದಾರೆ.

ವಿಶ್ವದಲ್ಲೇ ಅತೀ ಹೆಚ್ಚು ಎಚ್ಐವಿ/ಏಡ್ಸ್ ಪ್ರಕರಣಗಳಿಂದ ನಲುಗುತ್ತಿರುವ ದೇಶಗಳಲ್ಲೊಂದಾದ ದಕ್ಷಿಣ ಆಫ್ರಿಕಾದ ಅಧ್ಯಕ್ಷರೇ ಹೀಗೆ ಅಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವ ಮೂಲಕ ಸರಕಾರದ ಆರೋಗ್ಯ ಕಾರ್ಯಕ್ರಮಕ್ಕೆ ಭಂಗ ತರುತ್ತಿದ್ದಾರೆ ಎಂದು ಭಾರೀ ಟೀಕೆಗಳು ಅಧ್ಯಕ್ಷರ ವಿರುದ್ಧ ಬಂದಿದ್ದವು.

ಮಾಧ್ಯಮ ವರದಿಗಳಿಗೆ ಪತ್ರಿಕಾ ಹೇಳಿಕೆಯ ಮೂಲಕ ಪ್ರತಿಕ್ರಿಯೆ ನೀಡಿರುವ ಜೂಮಾ ಅವರು, ತನಗೀಗ ಮೂವರು ಪತ್ನಿಯರಿದ್ದಾರೆ. ಈಗ ಹುಟ್ಟಿರುವುದು 20ನೇ ಮಗು ಮತ್ತು ಆ ಮಗುವಿನ ತಾಯಿಯ ಜತೆ ನನಗೆ ದೈಹಿಕ ಸಂಪರ್ಕವಿತ್ತು. ಇದು ಸಂಪೂರ್ಣವಾಗಿ ನನ್ನ ಖಾಸಗಿ ವಿಚಾರ ಎಂದು ತಿಳಿಸಿದ್ದಾರೆ.

ಈ ಸಂಬಂಧ ಅಗತ್ಯವಿರುವ ಎಲ್ಲಾ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದೇನೆ. ಪಿತೃತ್ವವನ್ನು ಒಪ್ಪಿಕೊಳ್ಳುವುದು ಸೇರಿದಂತೆ ಆಕೆಯ ಕುಟುಂಬಕ್ಕೆ ಪರಿಹಾರವನ್ನು ಕೂಡ ನೀಡಿದ್ದೇನೆ. ಇದು ನಮ್ಮಿಬ್ಬರಿಗೆ ಸಂಬಂಧಿಸಿದ್ದು. ಈ ವಿಚಾರವನ್ನು ಜೂಮಾ ಮತ್ತು ಖೊಜಾ ಕುಟುಂಬಗಳು ಬಗೆಹರಿಸಿಕೊಂಡಿವೆ ಎಂದು ಜೂಮಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

2010ರ ಫಿಫಾ ವಿಶ್ವಕಪ್‌ನ ಸಂಘಟನಾ ಸಮಿತಿಯ ಅಧ್ಯಕ್ಷರಾಗಿರುವ ಇರ್ವಿನ್ ಖೊಜಾರವರ ಪುತ್ರಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ಈ ಹಿಂದೆ ತನಗೆ ಕೇವಲ 19 ಮಕ್ಕಳು ಮಾತ್ರ ಇದ್ದಾರೆ ಎಂದು ಜೂಮಾ ಹೇಳಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ