ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಸುನ್ನಿಗಳಿಂದ ಶಿಯಾ ಮುಸ್ಲಿಮರ ಬಸ್‌ಗೆ ದಾಳಿ; 12 ಬಲಿ (Bomb | Pakistan | Shiite Muslim | Karachi)
Bookmark and Share Feedback Print
 
ಪಾಕಿಸ್ತಾನದ ದಕ್ಷಿಣ ನಗರ ಕರಾಚಿಯಲ್ಲಿ ಶಿಯಾ ಮುಸ್ಲಿಂ ಅನುಯಾಯಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇತ್ತೀಚೆಗಷ್ಟೇ ನಡೆದ ಶಿಯಾ ಮುಸ್ಲಿಮರ ಮೆರವಣಿಗೆ ಮೇಲೆ ನಡೆಸಿದ ದಾಳಿಯಿಂದ ಡಜನ್‌ಗಟ್ಟಲೆ ಮಂದಿ ಸಾವನ್ನಪ್ಪಿದ ಘಟನೆ ಸೇರಿದಂತೆ ಕರಾಚಿಯಲ್ಲಿ ಕಳೆದ ಕೆಲವು ಸಮಯದಿಂದ ಅಲ್ಪಸಂಖ್ಯಾತ ಶಿಯಾ ಸಮುದಾಯದ ಮೇಲೆ ಸತತ ದಾಳಿಗಳನ್ನು ನಡೆಸಲಾಗುತ್ತಿದ್ದು, ಇದರ ಹಿಂದೆ ಪಾಕಿಸ್ತಾನದ ಬಹುಸಂಖ್ಯಾತ ಸುನ್ನಿ ಸಮುದಾಯದ ಒಂದು ಪಂಗಡವಿದೆ ಎಂದು ಆರೋಪಿಸಲಾಗಿದೆ.

16 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದ ಶಿಯಾ ಮುಸ್ಲಿಮರು ಗೊಂದಲಕ್ಕೊಳಗಾಗದೆ, ಶಾಂತಿಯಿಂದಿರಬೇಕು ಎಂದು ಪೊಲೀಸ್ ಮುಖ್ಯಸ್ಥ ವಾಸಿಂ ಅಹ್ಮದ್ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸ್ಫೋಟಕವನ್ನಿಟ್ಟಿದ್ದ ಬೈಕೊಂದರ ಪಕ್ಕದಲ್ಲಿ ಬಸ್ ಹಾದು ಹೋಗುವಾಗ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

ಭದ್ರತಾ ಅಧಿಕಾರಿಗಳು ಇದೀಗ ಬೈಕಿನ ಅವಶೇಷಗಳನ್ನು ಪರಿಶೀಲನೆ ಮಾಡುತ್ತಿರುವ ದೃಶ್ಯಾವಳಿಗಳನ್ನು ಸ್ಥಳೀಯ ಟೀವಿ ವಾಹಿನಿಗಳು ಪ್ರಸಾರ ಮಾಡುತ್ತಿವೆ. ಬಸ್ಸು ಬಹುತೇಕ ಧ್ವಂಸಗೊಂಡಿದ್ದು, ಪಕ್ಕದ ಕಟ್ಟಟಗಳ ಕಿಟಕಿಗಳು ಕೂಡ ಹಾನಿಗೀಡಾಗಿವೆ.

ಮಹಿಳೆಯರು ಮತ್ತು ಮಕ್ಕಳನ್ನೇ ಹೆಚ್ಚಾಗಿ ತುಂಬಿಕೊಂಡಿದ್ದ ಬಸ್ಸು ಶಿಯಾ ಧಾರ್ಮಿಕ ಸಮಾರಂಭವೊಂದಕ್ಕೆ ತೆರಳುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಜಾವೇದ್ ಅಕ್ಬರ್ ತಿಳಿಸಿದ್ದಾರೆ.

ಈಗಾಗಲೇ 11 ಮೃತ ದೇಹಗಳನ್ನು ಪಕ್ಕದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಬಂಧಪಟ್ಟವರು ವಿವರಣೆ ನೀಡಿದ್ದಾರೆ.

ಪಾಕಿಸ್ತಾನದ ಬಹುತೇಕ ಸುನ್ನಿ ಮತ್ತು ಶಿಯಾ ಮುಸ್ಲಿಮರು ಶಾಂತಿ-ಸಹಬಾಳ್ವೆಯಿಂದ ಬದುಕುತ್ತಿದ್ದರೂ, ಉಭಯ ಬಣಗಳ ಕೆಲವು ಕ್ರಾಂತಿಕಾರಿಗಳು ಪರಸ್ಪರ ದಾಳಿಗಳನ್ನು ನಡೆಸುವ ಮೂಲಕ ಅಶಾಂತಿ ಸೃಷ್ಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ