ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಅಗ್ನಿ-III ಕ್ಷಿಪಣಿಯಿಂದ ನಮಗೆ ಬೆದರಿಕೆಯಿಲ್ಲ: ಚೀನಾ (India | China | Agni-III missile | Ma Zhaoxu)
Bookmark and Share Feedback Print
 
ಇತ್ತೀಚೆಗಷ್ಟೇ ಭಾರತ ತನ್ನ ಅಗ್ನಿ-III ಖಂಡಾಂತರ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಿರುವುದರ ಬೆನ್ನಲ್ಲೇ ಹುಟ್ಟಿಕೊಂಡಿದ್ದ ವರದಿಗಳಿಗೆ ಪ್ರತಿಕ್ರಿಯಿಸಿರುವ ಚೀನಾ, ಭಾರತವು ನಮಗೆ ಅಥವಾ ನಾವು ಭಾರತಕ್ಕೆ ಬೆದರಿಕೆಯಲ್ಲ ಎಂದು ಸ್ಪಷ್ಟಪಡಿಸಿದೆ.

ಅಣ್ವಸ್ತ್ರ ಸಿಡಿತಲೆಗಳನ್ನು 3,000 ಕಿಲೋ ಮೀಟರ್ ದೂರಕ್ಕೆ ಹೊತ್ಯೊಯ್ಯುವ ಸಾಮರ್ಥ್ಯವುಳ್ಳ ಅಗ್ನಿ ಕ್ಷಿಪಣಿ, ಚೀನಾದ ಹಲವು ನಗರಗಳನ್ನು ಮುಟ್ಟುವ ಸಾಮರ್ಥ್ಯ ಹೊಂದಿದೆ. ಇದರಿಂದ ಚೀನಾ ಭೀತಿಗೊಳಗಾಗಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾ ಝಾಕ್ಸು, ಉಭಯ ದೇಶಗಳು ಮಿತ್ರರಾಷ್ಟ್ರಗಳು ಮತ್ತು ಪರಸ್ಪರ ಪೂರಕ ಸಂಬಂಧಗಳನ್ನು ಹೊಂದಿದ್ದೇವೆ, ನಮ್ಮ ನಡುವೆ ಯಾವುದೇ ಬೆದರಿಕೆಯ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ ಏಳರಂದು ಭಾರತ ಪರೀಕ್ಷೆ ನಡೆಸಿದ ಕ್ಷಿಪಣಿಯು ಚೀನಾದ ಪ್ರಮುಖ ನಗರಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂಬ ವರದಿಗಳಿಗೆ ನಾನು ಪ್ರತಿಕ್ರಿಯೆ ಅಥವಾ ವ್ಯಾಖ್ಯಾನ ನೀಡಲು ಬಯಸುವುದಿಲ್ಲ. ಚೀನಾ-ಭಾರತಗಳು ಮಿತ್ರರಾಷ್ಟ್ರಗಳು ಮತ್ತು ಪರಸ್ಪರ ಸಹಕಾರಿ ಮನೋಭಾವ ಹೊಂದಿವೆ ಎಂದರು.

ಚೀನಾವು ಭಾರತಕ್ಕೆ ಯಾವತ್ತೂ ಬೆದರಿಕೆಯಾಗದು ಅಥವಾ ಭಾರತವು ಚೀನಾಕ್ಕೆ ಯಾವತ್ತೂ ಬೆದರಿಕೆಯಾಗದು ಎಂದು ಮಾ ತಿಳಿಸಿದ್ದಾರೆಂದು ಚೀನಾದ 'ಕ್ಸಿನ್ಹುವಾ' ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಭಾರತ ಮತ್ತು ಚೀನಾಗಳು ಪರಸ್ಪರ ಈಗಿರುವ ಉತ್ತಮ ಸಂಬಂಧಗಳನ್ನು ಮುಂದುವರಿಸಲಿವೆ. ದ್ವಿಪಕ್ಷೀಯ ಸಂಬಂಧಗಳು ಉಭಯ ದೇಶಗಳ ಜಂಟಿ ಪ್ರಯತ್ನದೊಂದಿಗೆ ಮುಂಚೂಣಿಯತ್ತ ಸಾಗಲಿವೆ ಎಂದಷ್ಟೇ ಹೇಳಿದರು.

3,000 ಕಿಲೋ ಮೀಟರ್ ದೂರ ಕ್ರಮಿಸಬಲ್ಲ ಮತ್ತು 1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಹಾರಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಕಳೆದ ಭಾನುವಾರ ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ 200 ಕಿಲೋ ಮೀಟರ್ ದೂರದಲ್ಲಿರುವ ಭದ್ರಕ್ ಜಿಲ್ಲೆಯ ಧಾಮ್ರಾ ಎಂಬಲ್ಲಿನ ಇನ್ನರ್ ವೀಲರ್ ದ್ವೀಪದಲ್ಲಿ ಭಾರತ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. ಇದನ್ನು ಪಾಕಿಸ್ತಾನವೂ ಗಂಭೀರವಾಗಿ ಪರಿಗಣಿಸಿದೆ ಎಂದು ವರದಿಗಳು ಹೇಳಿದ್ದವು.
ಸಂಬಂಧಿತ ಮಾಹಿತಿ ಹುಡುಕಿ